ಏಪ್ರಿಲ್ 7, 2014

ಎರಡು ದಿನದ ನೆಮ್ಮದಿ ಅರಸಿ...


[ ಓ ಮನಸೇ ಸಂಚಿಕೆ ೮೭ - ೧೫ ಮಾರ್ಚ್ ೨೦೧೪ರಲ್ಲ್ಲಿ ಪ್ರಕಟವಾದ ಲಘು ಬರಹ]

http://www.readwhere.com/read/c/2556433
http://www.readwhere.com/read/c/2556374

                  ಬೆಂಗಳೂರಿನ  ಶುಕ್ರವಾರದ ರಾತ್ರಿಗಳು ನನಗಿಷ್ಟ.  ಅವಸರದಲ್ಲಿ ಊರಿಗೆ ಹೊರಟವರಿಂದ ನೂರೋ ಇನ್ನೂರೋ  ಸುಲಿವ ಖುಷಿಯಲ್ಲಿ  ಆಟೋಗಳೆಲ್ಲಾ ಮೆಜೆಸ್ಟಿಕ್ ನ ಕಡೆ ಮುಖ ಮಾಡಿರುತ್ತವೆ. ಬಸ್ ನ ಸೀಟುಗಳ ತುಂಬಾ ಬ್ಯಾಗುಗಳ ರಾಶಿ. ಆಟೋವನ್ನೋ, ಬಸ್ಸನ್ನೋ ಹತ್ತಿ ಮೆಜೆಸ್ಟಿಕ್ ನ ಕಡೆ ಹೊರಟವರಿಗೆ ಸಮಯಕ್ಕೆ ಸರಿಯಾಗಿ ಹೋಗಿ ತಲುಪುತ್ತೇವೋ ಇಲ್ಲವೋ ಅನ್ನೋ ಧಾವಂತ. ಬಸ್ಸು ಹೊರಟುಬಿಟ್ಟರೆ ಅನ್ನೋ ಚಿಂತೆ. ಬಸ್ ಸ್ಟ್ಯಾಂಡ್ , ಆನಂದರಾವ್ ಸರ್ಕಲ್, ಕಪಾಲಿ ಎಲ್ಲಿ ಹೋದರೂ ಧರ್ಮಸ್ಥಳ, ಶಿವಮೊಗ್ಗ, ಗೋಕರ್ಣ, ಹುಬ್ಬಳಿ, ಮಂಗಳೂರು ಎಲ್ಲಿ ಸಾರ್, ಹೇಳಿ ಸಾರ್ ಅಂತ ಕೇಳಿಕೊಂಡು ಹಿಂದೆ ಬರೋ ಜನ. ಎಲ್ಲರಿಂದಲೂ ತಪ್ಪಿಸಿಕೊಂಡು ರಾಜಹಂಸವೋ, ಐರಾವತವೋ ಮತ್ಯಾವುದೋ ಪ್ರೈವೇಟ್ ಬಸ್ ನ ಹತ್ತಿ  ಕುಳಿತರೆ ವಾರ ಪೂರ್ತಿ ಮಾಡಿದ ಜೀತದಿಂದ ಬಿಡುವು. ದಿನ ನಿತ್ಯದ ಟ್ರಾಫಿಕ್ ಜಂಜಾಟ, ಕರ್ಕಶ ಹಾರನ್ಗಳ ಶಬ್ದದಿಂದ ಬಿಡುವು. ಐದು ದಿನದ ಕೆಲಸದಲ್ಲೇ ಹಿಂಡಿ ಹಿಪ್ಪೆ ಮಾಡಿ ಹೈರಾಣು ಮಾಡಿಸಿದ ಬೆಂಗಳೂರಿನಿಂದ ಬಿಡುವು. ಕಣ್ಣಾಡಿಸಿದಲ್ಲೆಲ್ಲಾ  ಜನರಿದ್ದರೂ ಆವರಿಸಿಕೊಳ್ಳುವ ಒಂಟಿತನದಿಂದ ಬಿಡುವು.

                    ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲೇ ಓದಿ, ಇಲ್ಲೇ ಅಥವಾ ಇನ್ನೆಲ್ಲೋ ಇಂತಹದೇ ಮತ್ತೊಂದು ನಗರದಲ್ಲಿ ಕೆಲಸ ಮಾಡಿ ತಮ್ಮ ಜೀವನವೆಲ್ಲಾ ನಗರಗಳಲ್ಲೇ ಕಳೆಯುವವರನ್ನ ನೋಡಿದರೆ ನಿಜಕ್ಕೂ ಅನುಕಂಪ ಹುಟ್ಟುತ್ತದೆ. ಸುಮಾರು ಪ್ರತಿ ವಾರ ಊರಿಗೆ ಹೋಗ್ತೀಯಲ್ಲಾ, ಅಲ್ಲೇನು ಅಂತದ್ದು ಇಟ್ಟಿದೀಯ ಅಂತ ಸುಮಾರು ಜನ ಕೇಳಿರ್ತಾರೆ. ವಿವರಿಸಬಲ್ಲೆವಾ! ಗೊತ್ತಿಲ್ಲ....  ಸುಮ್ಮನೆ ನಕ್ಕಿರುತ್ತೇವೆ.

ಮಳೆಗಾಲದಲ್ಲಿ ಒಂದೇ ಸಮನೆ ದಿನಗಟ್ಟಲೆ ಸುರಿಯುವ ಜಡಿ ಮಳೆಯ ಸದ್ದು, ಸಂಜೆಯ ಹೊತ್ತಿಗೆ ಊರ ಕೆರೆಯ ಮೇಲೆ ಹಾದು ಹೋಗುವಾಗಿನ ತಣ್ಣನೆಯ ಗಾಳಿ, ಕೇಶವನ ಅಂಗಡಿಯ ಮಸಾಲೆ ಮಂಡಕ್ಕಿಯ ಜೊತೆ ಕಂಚಿಕಾಯಿ ಸೋಡಾದ  ರುಚಿ, ಮುಂಚೆ ತುಂಬಾ ಸ್ಟ್ರಿಕ್ಟ್ ಆಗಿದ್ದ ಹೈಸ್ಕೂಲ್ ನ ಹೆಡ್ಮಾಸ್ಟರ್ ರಸ್ತೆಯಲ್ಲೆಲ್ಲೊ ಅಚಾನಕ್ಕಾಗಿ ಸಿಕ್ಕು ಸಲುಗೆಯಿಂದ ಪ್ರೀತಿಯಿಂದ ಮಾತಾಡಿಸುವ ರೀತಿ, ಊರಲ್ಲಿರುವ ಟಾಕೀಸ್ ನಲ್ಲಿ ಯಾವುದೊ ಒಂದು ಸಿನೆಮಾ ನೋಡಿ, ಗೆಳೆಯರೊಡನೆ ಕೂತು ಸಿನೆಮಾಕ್ಕೊಂದಷ್ಟು ಬೈದರೆ ಸಿಗುವ ಸಮಾಧಾನ... ಇದನ್ನೆಲ್ಲಾ ವಿವರಿಸಬಲ್ಲೆವಾ! ಗೊತ್ತಿಲ್ಲ.

                  ಊರಿಗೆ ಹೊರಟ ಬಸ್ಸಿನಲ್ಲಿ ಒಂದಾದರೂ ಪರಿಚಯದ ಮುಖ ಇದ್ದೇ ಇರುತ್ತೆ. ಪ್ರೈಮರಿ ಸ್ಕೂಲ್ ನಲ್ಲಿ ಜೊತೆಗೆ ಓದುತ್ತಿದ್ದವನೊಬ್ಬ ' ಹೆ.. ಅರಾಮೇನೋ, ನನ್ನ ನೆನಪಿದ್ಯಾ ಅಥವಾ ಮರೆತು ಬಿಟ್ಯಾ' ಅಂತ ಕೇಳಿದಾಗ ಅವನ ಹೆಸರಿಗಾಗಿ
ತಡಬಡಾಯಿಸಿರುತ್ತೇವೆ. ಕೊನೆಗೂ ಅವನ ಹೆಸರು ತೋಚದೆ  ಅವನೇ ಮತ್ತೆ ನೆನಪಿಸಿದಾಗ, ಛೆ ಅವನಿಗೆ ಬೇಜಾರಾಯಿತೇನೋ ಅಂತ ಮರುಗಿರುತ್ತೇವೆ. ಹೊಸದಾಗಿ ಮದುವೆಯಾದ ಗೆಳೆಯನೊಬ್ಬ ಹೆಂಡತಿಯನ್ನ ಪರಿಚಯ ಮಾಡಿಸಲೋ ಅಥವಾ ಕಾಣದಂತೆ ಇದ್ದುಬಿಡಲೋ ಅಂತ ಗೊಂದಲಕ್ಕೆ ಬಿದ್ದಿರುತ್ತಾನೆ. ಅಂತೂ ಗುರುತಿದ್ದವರನ್ನ ಮಾತಾಡಿಸಿ ಬಸ್ಸಿನ ಸೀಟನ್ನ ಹಿಂದೆ ಮಾಡುತ್ತಿದ್ದಂತೆ, ಕಾಲೇಜಿನ ಕಣ್ಮಣಿಯಾಗಿದ್ದ ಅವಳು ಕಾಣಿಸಿಬಿಟ್ಟಿರುತ್ತಾಳೆ. ಹೋಗಿ ಮಾತಾಡಿಸಲಾ? ಗುರುತಿರಬಹುದಾ ಇಲ್ಲವಾ ಅನ್ನೋ ಗುಮಾನಿ.  ಕಂಡು ನಕ್ಕರೆ ಬಸ್ಸಿನಲ್ಲಿ ಸಿಹಿ ನಿದ್ದೆ. ಕಂಡು ಯಾರೆಂದು ಗುರುತೇ ಇಲ್ಲದಂತೆ ಮುಖ ತಿರುಗಿಸಿದರೆ  ಬೆಳಿಗ್ಗೆಯ ತನಕ ಸೀಟಿನಲ್ಲಿ ಹೊರಳಾಡಿ ಮೈ ಕೈ ನೊವು.

ಊರು ನಮ್ಮ ಪಾಲಿಗೆ ಒಂದು ಐಡೆಂಟಿಟಿ. ಊರಿನ ಬಗ್ಗೆ ಬೆಂಗಳೂರಿನ ಗೆಳೆಯರಿಗೆ ನೂರಾರು ಕಥೆ ಹೇಳಿರುತ್ತೇವೆ. ಜೋಗಕ್ಕೆ ಬರುವಾಗ ನಿಮ್ಮ ಊರಿಗೆ ಬಂದಿದ್ದೆ, ಹಂಪಿ ನೋಡುವಾಗ ನಿಮ್ಮ ಊರು ಸಿಕ್ಕಿತ್ತು. ಮುರುಡೇಶ್ವರದ ಪಕ್ಕ ಇರೋದೇ ನಿಮ್ಮ ಊರಾ? ಅಂತೆಲ್ಲಾ ಕೌತುಕದಿಂದ ಯಾರಾದರೂ ಕೇಳುತ್ತಿದ್ದರೆ, ಆ ಜಾಗಗಳೆಲ್ಲಾ ನಾವು ಸಣ್ಣವರಿದ್ದಾಗಲೇ ಓಡಾಡಿದ ಜಾಗವೆಂದು ಹೆಮ್ಮೆ ಎನಿಸುತ್ತದೆ.  ಹೊಸದಾಗಿ  ಯಾರಾದರೂ ಪರಿಚಯವಾದರೆ ಯಾವ ಊರು ಅಂತ ತಕ್ಷಣ ಕೇಳಿರುತ್ತೇವೆ. ತಮ್ಮದೇ ಊರಾದರೆ ಅಥವಾ ಹತ್ತಿರದ ಊರಾದರೆ ಅವರೊಡನೆ ಮಾತಾಡುವ ರೀತಿಯೇ ಬೇರೆಯಾಗಿಬಿಡುತ್ತದೆ. ಊರಿನ ಪರಿಚಯದವರ ಬಗ್ಗೆ, ಓದಿದ ಕಾಲೇಜಿನ ಬಗ್ಗೆ, ಯಾವುದೊ ಲೋಕಲ್ ಹೊಡೆದಾಟದ ಬಗ್ಗೆ, ಹೀಗೆ ತಕ್ಷಣ ಮಾತು ಹರಿದಾಡಿರುತ್ತದೆ . ಬೆಂಗಳೂರಿನವರಾದರೆ ಇದೆಲ್ಲದರ ಅನುಭವ ಆಗಿರಲಿಕ್ಕಿಲ್ಲ. ಬೃಹತ್ ಬೆಂಗಳೂರಿನಲ್ಲಿ ಎಷ್ಟೋ ನಗರಗಳು.. ಎಷ್ಟೋ ಕಾಲೇಜುಗಳು.. ಪಕ್ಕದ ಮನೆಯವರ ಪರಿಚಯ ಎಷ್ಟೋ!

ಬಸ್ಸು ಅರಸೀಕೆರೆಗೆ  ಬಂದು ನಿಲ್ಲುತ್ತದೆ, ತಕ್ಷಣ 'ಟೀ ಕಾಫಿ ಊಟ ಐದೇ ನಿಮಿಷ  ಐದು ನಿಮಿಷ ಅಷ್ಟೇ ಬೇಗ ಬೇಗ' ಅಂತ ಪ್ರತಿ ಬಸ್ಸಿಗೂ ಬಡಿದು ಬಡಿದು ಗಾಡ ನಿದ್ರೆಯಲ್ಲಿದ್ದವರನ್ನೆಲ್ಲಾ ಎಬ್ಬಿಸಿರುತ್ತಾನೆ ಅಲ್ಲಿನ ಹೋಟೆಲಿನ ಹುಡುಗ. ಕಟ್ಟಿಕೊಂಡಿದ್ದನ್ನೆಲ್ಲಾ ಹೊರ ಹಾಕಿದರೆ ಒಮ್ಮೆ ನಿರಾಳ. ಹಸಿದಿದ್ದರೆ ಏನನ್ನಾದರೂ ತಿಂದು ಮತ್ತೆ ಬಸ್ ಹತ್ತಿದರೆ ಊರಿನ ನೆನಪಲ್ಲಿ, ಬೆಂಗಳೂರು ಬಿಟ್ಟು ಹೊರಬಂದ ಖುಷಿಯಲ್ಲಿ ನೆಮ್ಮದಿಯ ನಿದ್ದೆ. ಮತ್ತೆ ಬಸ್ಸು ಹೊರಡುತ್ತದೆ ಊರಿನ ಕಡೆಗೆ. ಎಚ್ಚರವಾದಾಗ ಬೆಳಕು ಹರಿಯಲಾರಂಭಿಸಿರುತ್ತೆ . ಕಿಟಕಿಯ ಪರದೆ ಸರಿಸಿದರೆ ಕಣ್ ತುಂಬಾ ಹಸಿರು. ಊರೆಲ್ಲೊ ಹತ್ತಿರದಲ್ಲಿದೆ. ಪರದೆ ಮುಚ್ಚುವ ಮನಸ್ಸಾಗುವುದಿಲ್ಲ. ಪ್ರತಿ ಮೈಲಿಗಲ್ಲನ್ನೂ ನೋಡಿ ಇನ್ನೆಷ್ಟು ದೂರವಿದೆ ಎಂದು ನೋಡುವ ಆತುರ. ಕೊನೆಗೂ ಊರು ಬಂದು ಬಸ್ ಇಳಿಯುತ್ತಿದ್ದಂತೆ, ತಲೆಯ ಮೇಲಿದ್ದ ಜವಾಬ್ದಾರಿಯನ್ನೆಲ್ಲಾ ಬಿಟ್ಟು ನಿರಾಳವಾದ ಅನುಭವ. ನೆಮ್ಮದಿಯನ್ನ ಅರಸಿ ಊರಿಗೆ ಬಂದವನಿಗೆ ಅಲ್ಲಿದ್ದಷ್ಟು ಹೊತ್ತೂ ನೆಮ್ಮದಿ. ಇಲ್ಲೇ ಇದ್ದರೆ ಸುಖವಲ್ಲವೇ ಅನ್ನೋ ಮುಗಿಯದ ದ್ವಂದ್ವ. ಒಟ್ಟಿನಲ್ಲಿ ಇನ್ನೆರಡು ದಿನ ಊರಿನ ಮಡಿಲಲ್ಲಿ ಬೆಚ್ಚಗಿನ ಜೀವನ.

--
ಅಕ್ಷಯ್ ಪಂಡಿತ್, ಸಾಗರ
೧/೧೭/೨೦೧೪








ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ