ಏಪ್ರಿಲ್ 8, 2016

ಭಾರತ್ ಸಿಟಿ


   

          'ಭಾರತ್ ಇಕೋ ಸಿಟಿಅಂತ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಬೋರ್ಡಿನ ಮುಂದೆ ನಿಂತುಮುಖದ ಮೇಲೆ ಬೀಳುತ್ತಿರುವ ಸೂರ್ಯನ ಕಿರಣಗಳು ಮರೆಮಾಚುವಂತೆ ಫೋನನ್ನ ಅಡ್ಡ ಇಟ್ಟು ಸೆಲ್ಫಿ ಕ್ಲಿಕ್ಕಿಸಿದ ಸಮೀರ. ಕ್ಲಿಕ್ಕಿಸಿದ ಫೋಟೋ ನೋಡಿದ ತಕ್ಷಣ,ಮುಖದಲ್ಲಿ ಇನ್ನೂ ಸ್ವಲ್ಪ ನಗು ಇದ್ದಿದ್ದರೆ ಚೆನ್ನಾಗಿರ್ತಿತ್ತೇನೋ ಅನ್ನಿಸಿತು. ಹಿಂದೆ ಇದ್ದ ಬೋರ್ಡಿನ ಅಕ್ಷರಗಳೂ ತುಂಬಾ ದೊಡ್ದವಿದ್ದದರಿಂದ ಬರೀ ಭಾರತ್ ಅಂತಿದ್ದದ್ದಷ್ಟೇ ಕಾಣಿಸಿತು.  ಬೋರ್ಡು ಪೂರ್ಣವಾಗಿ ಬರುವಂತೆ ಫೋಟೋ ತೆಗೆಯುವಂತೆ ಯಾರಿಗಾದರೂ ಕೇಳಬೇಕು ಅಂತ ಸುತ್ತ ಇರುವವರನ್ನೆಲ್ಲಾ ಒಮ್ಮೆ ನೋಡಿದ. ಅಲ್ಲಿದ್ದವರ್ಯಾರೂ ಕನ್ನಡದವರಂತೆ ಕಾಣಲಿಲ್ಲ. ಎಲ್ಲಿಂದಲೋ ಬಂದಿರುವವರಿರಬೇಕು ಅನಿಸಿತು. ತನಗೆ ಬರುತ್ತಿದ್ದ ಅಲ್ಪ ಸ್ವಲ್ಪ ಇಂಗ್ಲೀಷಿನಲ್ಲಿ ಅವರಿಗೆ ಕೇಳೋಕೆ ಯಾಕೋ ಧೈರ್ಯ ಸಾಲಲಿಲ್ಲ. ಅಷ್ಟಕ್ಕೂ ಬೆಳ್ಳಂಬೆಳಿಗ್ಗೆ ಈ ಬೋರ್ಡಿನ ಮುಂದೆ ನಿಂತು ಫೋಟೋ ತೆಗೆದುಕೊಳ್ಳುತ್ತಿರುವ ತನ್ನನ್ನು ಕಂಡು ಅವರೇನು ಅಂದುಕೊಂಡಾರು ಅಂತನಿಸಿ ಸುಮ್ಮನಾದ. ಆ ಬೋರ್ಡಿನ ಹಿಂದೆ ಬೃಹತ್ ಅಮೃತ ಶಿಲೆಯ ಕಟ್ಟಡ. ಅದರ ಒಳಹೊಕ್ಕ. ವಿಶಾಲವಾದ ಆವರಣ. ಕಟ್ಟಡದ ಗೋಡೆಗಳಿಗೆ ಚಿನ್ನದ ಬಣ್ಣದ   ಲೇಪನ.  ಮಧ್ಯದಲ್ಲೊಂದು ದೊಡ್ಡ ಗಡಿಯಾರಅದರ ಪ್ರಕಾರ ಬೆಳಿಗ್ಗೆ ಐದು ಕಾಲು. ಎಂದಿನಂತೆ ತನ್ನ ರೂಮಲ್ಲಿದ್ದಿದ್ದರೆ ಸೊಂಪಾದ ನಿದ್ದೆ ಬರುತ್ತಿದ್ದ ಸಮಯ. ಅಲಾರಂ ಎಬ್ಬಿಸಿದಷ್ಟೂ ನಿದ್ದೆ ಹೆಚ್ಚಾಗುತ್ತಿತ್ತು. ಆದರೆ ಇಲ್ಲಿ ಆಗಲೇ ಬೆಳಗಾಗಿ ಸುಮಾರು ಹೊತ್ತಾದಂತೆ ಜನ ಅವಸರದಿಂದ ಓಡಾಡುತ್ತಿರುವುದನ್ನ ನೋಡಿಹೊಸತಾಗಿ ಕಟ್ಟಲ್ಪಟ್ಟ ನಗರದ  ಬಗ್ಗೆ ಅವನಿಗೆ ಆಗಲೇ ಚೂರು ಹೆಮ್ಮೆ. 

          ಕಟ್ಟಡದ ಒಳಗೆ ಮತ್ತೊಂದು ಫೋಟೋ ತೆಗೆದುಕೊಳ್ಳುವ ಮನಸ್ಸಾಯಿತು. ಆದರೆ ಆಸೆಯನ್ನ ಹತ್ತಿಕ್ಕಿದ. ಅಲ್ಲಿಂದ ರೈಲು ಹಿಡಿದು ಒಂದು ಗಂಟೆ ಕೂತು 'ಆಟೋ ಸಿಟಿ'ಗೆ  ಬಂದು ಅವನ ಸುಪರ್ವೈಸರ್ ಗೆ  ಫೋನ್ ಮಾಡುವುದಕ್ಕೆ ಕಳಿಸಿದ್ದ ಇ- ಮೇಲ್ ನ ಪ್ರಿಂಟ್ ಔಟ್ ಮತ್ತೆ ನೋಡಿದ. ರೈಲಿನ ನಂಬರ್ ಎಲ್ಲೂ ಇರಲಿಲ್ಲ. ಅದೇ ಕಟ್ಟಡದ ಒಂದು ಭಾಗದಲ್ಲಿ ದೊಡ್ಡ ಮಾಪ್ ಬಿಡಿಸಲಾಗಿತ್ತು. ಆಟೋ ಸಿಟಿಗೆ ಟ್ರೈನ್ ನಂಬರ್ ೧೭ ಈಸ್ಟ್ ಅಂತ ಕಷ್ಟಪಟ್ಟು ಹುಡುಕಿದ. ಟಿಕೆಟ್ ತೆಗೆದುಕೊಳ್ಳುವಲ್ಲಿ ಹೋದ. ಟಿಕೆಟ್ ಕೊಡುವ ಜಾಗದಲ್ಲಿ ಯಾರೂ ಇರಲಿಲ್ಲ. ಯಾರಾದರೂ ಬರಬಹುದು ಅಂತ ಸ್ವಲ್ಪ ಹೊತ್ತು    ಕಾದು ನೋಡಿದ. ಅಲ್ಲೇ ಓಡಾಡುತ್ತಿರುವವರನ್ನ ಯಾರಾದರಲ್ಲೂ ಕೇಳುವುದಕ್ಕೆ ಹಿಂಜರಿಕೆ.  ಅದರಲ್ಲೂ ಯಾರೂ ತನ್ನ ಕಡೆಯೂ ನೋಡದೆ  ವೇಗವಾಗಿ ಒಂದಲ್ಲ ಒಂದು ರೈಲಿನತ್ತ ಓಡುತ್ತಿದ್ದಾರೆ. ಎಲ್ಲರಲ್ಲೂ ಯಾವುದೋ ಗಡಿಬಿಡಿ. ಕೊನೆಗೂ ಯಾರಿಗಾದರೂ ಕೇಳೇ ಬಿಡೋದು ಅಂತ ತೀರ್ಮಾನಿಸುವಷ್ಟರಲ್ಲಿ ಅಲ್ಲೇ ಇದ್ದ ಟಿವಿಯ ಪರದೆಯಲ್ಲಿ ಟಿಕೆಟ್ ಬುಕ್ ಹೇಗೆ ಮಾಡುವುದುರೈಲಿನ ಪ್ಲಾಟ್ಫಾರ್ಮ್ ಕಂಡುಹಿಡಿಯುವುದು ಹೇಗೆ ಎಂಬೆಲ್ಲದರ ವಿವರಣೆ ವಿಡಿಯೋ ಮುಖಾಂತರ ಬರುತ್ತಿರುವುದನ್ನ ಗಮನಿಸಿಅದರ ಆಣತಿಯಂತೆಯೇ  ಎಟಿಎಂ ಮೆಶಿನ್ನಿನ ತರಹದ ಕಿಯೋಸ್ಕ್ ಒಂದಕ್ಕೆ ನೋಟು ಹಾಕಿ ಟಿಕೆಟ್ ತೆಗೆದುಕೊಂಡ. ತಾನು ಒಳಬಂದ ದ್ವಾರದ ಎದುರು ಗೋಡೆಯ ಮೇಲೆ ಸುಮಾರು ಹತ್ತಿಪ್ಪತ್ತು ಬಾಗಿಲುಗಳು. ಪ್ರತಿಯೊಂದೂ ದ್ವಾರದಲ್ಲೂ  ಒಂದೊಂದು ಪ್ಲಾಟ್ಫಾರ್ಮ್. ಆಟೋ ಸಿಟಿಫುಡ್ ಸಿಟಿಪ್ಲೇ ಸಿಟಿಅಗ್ರಿ ಸಿಟಿರೆಸಿಡೆನ್ಶಿಯಲ್ ಹೀಗೆ ಹತ್ತಾರು ದಾರಿಗಳು. ೧೭ ಇ ಪ್ಲಾಟ್ಫಾರ್ಮ್ ೫ ಅನ್ನೋ ಬೋರ್ಡು ನೋಡಿ ಆ ಕಡೆ ಓಡಿದ. ಹೊಸ ನಗರ ಅವನಿಗೆ ಗೊತ್ತಿಲ್ಲದೆಯೇ ಅವನಲ್ಲಿ ಹೊಸ ವೇಗವನ್ನ ತುಂಬುತ್ತಿತ್ತು. 

          ಪ್ಲಾಟ್ಫಾರ್ಮ್ ಗೆ ಬಂದು ನಿಂತ ಎರಡೇ ನಿಮಿಷದಲ್ಲಿ ರೈಲು ವೇಗವಾಗಿ ಬಂದು ನಿಂತಿತ್ತು. ಸುವ್ಯವಸ್ಥಿತ ಮೆಟ್ರೊ ರೈಲು. ದ್ವಾರದಲ್ಲಿ ಟಿಕೆಟ್ ತಾನೇ ತಾನಾಗಿ ಸ್ಕಾನ್ ಆಗುತ್ತಿತ್ತು. ಟಿಕೆಟ್ ಇಲ್ಲದಲ್ಲಿ ದೊಡ್ಡ ಬೀಪ್ ಶಬ್ಧ. ಎಲ್ಲರ ಜೊತೆ  ಸಾಲಲ್ಲಿ  ನಿಂತು ಅದನ್ನ ಹತ್ತಿಕೊಂಡ ಸಮೀರ. ರೈಲಿನ ಬೋಗಿಯ ಹಿಂದಿನ ಸೀಟಿನಲ್ಲಿ ಮಫ್ಲರ್ ಹೊದ್ದುಕೊಂಡುದೊಡ್ಡ ಅಕ್ಷರಗಳಲ್ಲಿ ರೀಬಾಕ್  ಅಂತ ಬರೆದಿದ್ದ ಸ್ವೆಟರ್ ಧರಿಸಿದ್ದ ಒಂದೆಪ್ಪತ್ತು ವರ್ಷದ ಮುದುಕನ ಪಕ್ಕದಲ್ಲಿ ಹೋಗಿ ಕುಳಿತುಕೊಂಡ. ರೈಲು ಸೆಕೆಂಡುಗಳಲ್ಲಿ ಜನರಿಂದ ತುಂಬಿ ನಿಮಿಷದಲ್ಲಿ ಮತ್ತೆ ವಾಪಸ್ ಹೊರಟಿತು. ಸಮೀರನಿಗೆ ಸಣ್ಣ ಆತಂಕಸರಿಯಾದ ರೈಲಲ್ಲೇ ಬಂದು ಕೂತಿದ್ದೇನಾ ಅಥವಾ ಇನ್ಯಾವುದರಲ್ಲೋ ಬಂದು ಕುಳಿತಿರಬಹುದಾಪಕ್ಕದಲ್ಲಿದ್ದ ಮುದುಕನಲ್ಲಿ ಕೇಳುವ ವಿಚಾರ ಮಾಡಿದ. ಆತನೂ ಎಲ್ಲೋ ಹೊರಗಿನವನಿರಬೇಕು ಅಂತನಿಸಿ ಇಂಗ್ಲಿಷಿನಲ್ಲಿ ವಿಚಾರಿಸಿದ. ಆ ಮುದುಕ ಮಾತನಾಡಲಿಲ್ಲ. ತಕ್ಷಣವೇ ಕನ್ನಡದಲ್ಲಿ ಕೇಳಿದ ಸಮೀರ. ಆ ಮುದುಕ ಈ ಬಾರಿಯೂ ಮಾತನಾಡುವ ಉಮೇದಿ ತೋರಿಸಲಿಲ್ಲ. 'ಹೌದು. ಆಟೋ ಸಿಟಿಗೆ ಹೋಗತ್ತೆಅಂತಷ್ಟೆ ಹೇಳಿ ತನ್ನ ಪಾಡಿಗೆ ತಾನು ಕಣ್ಣು ಮುಚ್ಚಿ ಮಲಗಿದ. ಇಡೀ ಬೋಗಿಯನ್ನ ಮತ್ತೆ ಕಣ್ಣಾಡಿಸಿದ. ನೋಡಿದ ತಕ್ಷಣ ಸುಲಭಕ್ಕೆ ಮಾತನಾಡಿಸಬಹುದು ಅಂತನಿಸುತ್ತಿದ್ದ ಒಬ್ಬ ಜೀವಿಯೂ ಮೌನಕ್ಕೆ ಶರಣಾಗಿದ್ದು ನೋಡಿಯಾರ ಸಹವಾಸವೂ ಬೇಡ ಅಂತ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತನ್ನ ಪಾಡಿಗೆ ಕೂತ. 'ವೆಲ್ಕಮ್ ಟು ಆಟೋ ಸಿಟಿ. ಪ್ಲೀಸ್ ಟೇಕ್ ಕೇರ್ ಆಫ್ ಯುವರ್ ಬಿಲೋಂಗಿಂಗ್ಸ್' ಅಂತ ರೈಲಿನ ಉದ್ಘೋಷಕಿಯ ಧ್ವನಿ ಹೊರಟಿದ್ದೇ ಸೀಟಿಂದ ದಡಬಡಾಯಿಸಿ ಎದ್ದ. ಒಂದು ಗಂಟೆಗೂ ಮುಂಚೆಯೇ ಆಟೋ ಸಿಟಿಯ ದೊಡ್ಡ ದೊಡ್ಡ ಕಾರ್ಖಾನೆಗಳುಇಷ್ಟು ದಿನ ಕೆಲಸ ಹುಡುಕುತ್ತಿದ್ದ ಅವನ ಕಣ್ಣುಗಳಿಗೆ ತಣ್ಣನೆ ಸ್ವಾಗತ ಹೇಳಿದ್ದವು.

     ಹೊಸ ಜಾಗಕ್ಕೆ ಬಂದವನೇ ತನ್ನ ಸುಪರ್ವೈಸರ್ ಜೊತೆ ಭೇಟಿಯಾದ. ಅಲ್ಲೇ ಅವತ್ತಿನ ದಿನದ ಮಟ್ಟಿಗೆ ಸುಧಾರಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ರೂಮಿಗೆ ಹೋದವನೇ ಶವರ್ ಗೆ ಬೆನ್ನು ತಾಡಿದ. ಧಾರವಾಡದಿಂದ ಕಳೆದ ಹದಿನಾಲ್ಕು ಗಂಟೆ ಬಸ್ಸಿನಲ್ಲಿ ಪ್ರಯಾಣಿಸಿ ರಾತ್ರಿಯೆಲ್ಲಾ ಬಸ್ಸಿನಲ್ಲಿ  ಅತ್ತ ಮಲಗಲಾರದೇಇತ್ತ ಎದ್ದಿರಲಾರದೇ ಬಂದ ಮೈ ಕೈ ನೋವಿಗೆ ಬಿಸಿನೀರು ಹಿತವೆನಿಸಿತು. ಕಣ್ಣು ಸಣ್ಣದೊಂದು ನಿದ್ದೆ ಬೇಡುತ್ತಿತ್ತು. 

          ಧಾರವಾಡದ ಮಾಳಮಡ್ಡಿಯ ಎರಡಂತಸ್ತಿನಒಂದಿಪ್ಪತ್ತು ಕೋಣೆಯ ಮಹಾವೀರ್ ಬಿಲ್ಡಿಂಗಿನ ಮೊದಲನೇ ಅಂತಸ್ತಿನ ಮೆಟ್ಟಿಲ ಪಕ್ಕದ ಸಣ್ಣ ಕೋಣೆಯೊಂದರಲ್ಲಿಮಲಗಿದರೆ ತಲೆಯಿಂದ ಕಾಲಿನ ತನಕ ಮಾತ್ರ ಬರುವಷ್ಟು ಉದ್ದದ ಕಡಪಾ ಕಲ್ಲಿನ ಮಂಚದ ಮೇಲೆ ಚಾಪೆ ಹಾಸಿಬೇಸಿಗೆಯ ಧಗೆಯಲ್ಲಿತಿರುಗದ ಫ್ಯಾನಿನ ಕಡೆ ಮುಖ ಹಾಕಿಕೈಗೆ ಸಿಕ್ಕಿದ ಪುಸ್ತಕದಲ್ಲೋದಿನಪತ್ರಿಕೆಯಲ್ಲೋ ಗಾಳಿ ಬೀಸಿಕೊಂಡುಏನನ್ನೋ ಓದಿಕೊಂಡು ಸಮಯ ಕಳೆಯುತ್ತಿದ್ದ ಸಮೀರನಿಗೆ ಬೆಳಗಾಗುವುದರ ಒಳಗೆ ತನ್ನ ಅದೃಷ್ಟ ಬದಲಾಗಿ ಹವಾ ನಿಯಂತ್ರಿತ ಸರ್ವೀಸ್ ಅಪಾರ್ಟ್ಮೆಂಟ್ ಒಂದರಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಉರುಳಾಡುತ್ತಾ ಮಲಗಿರುವುದು ವಿಚಿತ್ರವಾಗಿ ಕಂಡಿತ್ತು. ಹೊಸತಾಗಿ ಶುರುವಾಗಲಿರುವ ಕೆಲಸಅಲ್ಲಿ ಪರಚಯವಾಗಲಿರುವ ಹೊಸಾ ಜನಹೊಸಾ ಊರುಹೊಸತಾಗಿ ಸಿಗುತ್ತಿರುವ ಸೌಕರ್ಯಗಳು. ಕುತೂಹಲದ ಬೆರಗುಗಣ್ಣಲ್ಲೇ ಹೊಸ ಕನಸುಗಳೂ.  

          ಭವಿಷ್ಯದ ಕನಸುಗಳು ನಿದ್ದೆಗೆ ಜಾಗ ಕೊಡಲಿಲ್ಲ. ಕಾರ್ಖಾನೆಯ ಕಡೆ ಹೊರಟ. ಕಾರುಗಳ ಇಂಜಿನ್ ತಯಾರಿಸುವ ಜಾಗ ಅದು. ಅಲ್ಲಿ ಅವನ ಕೆಲಸ ವಿವರಿಸಲಾಯಿತು. ಅವನ ಮಾರ್ಗದರ್ಶಕನ ಪರಿಚಯ ಆಯಿತು. ಅಲ್ಪ ಸ್ವಲ್ಪ ಕೆಲಸ ಕಲಿತುಕೊಂಡು ಮತ್ತೆ ಸಂಜೆ ಇಕೋ ಸಿಟಿಯ ಕಡೆಯ ರೈಲು ಹತ್ತಿದ. ಖಾಯಂ ಉಳಿದುಕೊಳ್ಳಲು ರೆಸಿಡೆನ್ಸಿಯಲ್ ಸಿಟಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಿನ್ನೊಂದು ರೈಲು.

          ರೈಲಿನಲ್ಲಿ ಪಕ್ಕದ ಸೀಟಿನಲ್ಲಿ ಮತ್ತೆ ಅದೇ ಮುದುಕ. ಸಮೀರ ಅವನನ್ನ ನೋಡಿ ಮುಗುಳ್ನಕ್ಕ. ಆ ಮುದುಕನಿಗೂ ಬೆಳಿಗ್ಗೆ ಇವನನ್ನ ನೋಡಿದ ನೆನಪಾಗಿರಬೇಕು. ಒಳ್ಳೆ ಮೂಡಿನಲ್ಲೂ ಇದ್ದ. ಅವನೂ ವಾಪಸ್ ನಕ್ಕ. 'ನಿಮ್ದೂ ಇಲ್ಲೇ ಕೆಲ್ಸಾ ಏನೂ?' ಸಮೀರ ಕೇಳಿದ. ಆ ಮುದುಕ ಮಾತನಾಡಲಿಲ್ಲಸುಮ್ಮನೆ ನಕ್ಕ. ಮಾತಾಡಿಸಿದರೂ ವಾಪಸ್ ಮಾತಾಡದ ಮುದುಕನನ್ನ ನೋಡಿ ಸಿಟ್ಟು ಬಂತು. ಯಾಕೋ ಮಾತು ಮುಂದುವರೆಸುವುದು ವ್ಯರ್ಥ ಎನಿಸಿ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಳ್ಳುವಷ್ಟರಲ್ಲಿಆ ಮುದುಕನೇ ಮಾತಿಗೆ ಮುಂದಾದ. 'ಇಲ್ಲೇ ಇತ್ತು ನನ್ ಕಬ್ಬಿನ್ ಗದ್ದೆನನ್ ಮನೆ'. ಸಮೀರ ಕಿಟಕಿಯಿಂದ ಹೊರಗಡೆ ಇಣುಕಿದ. ಯಾವ ಗದ್ದೆಯೂ ಕಾಣಲಿಲ್ಲ. ಬರೀ ಕಾರ್ಖಾನೆಗಳುಆಫೀಸುಗಳು. ಮುದುಕನನ್ನ ಮತ್ತೆ ದಿಟ್ಟಿಸಿದ. 

          'ಹೆಂಡ್ತಿ ಹೊಂಟೋಗಿ ಐದು ವರ್ಷ ಆಯ್ತು. ಇಬ್ರ್ ಮಕ್ಳು. ಇಬ್ರೂ ಇಲ್ಲೇ ಆಟ ಆಡ್ಕಂಡ್ ಬೆಳ್ದವ್ರು.. ಈಗ ಒಬ್ಬ ಮುಂಬೈಲಿ ಇದಾನೆ. ಇನ್ನೊಬ್ಬ ಮದ್ರಾಸಲ್ಲಿ ಯಾವ್ದೋ ಕಾಲ್ ಸೆಂಟ್ರಲ್ಲಿ ಕೆಲ್ಸ ಮಾಡ್ತಾವ್ನೆ. ಅವ್ನು ಕಳೆದ ಸಲ ಬಂದಾಗ ತಂದಿರೋ ಸ್ವೆಟರ್ ಇದು. ಅದೇನೋ ಬ್ರಾಂಡ್ ಅಂತೆ. ದಿನಾ ಈ ರೈಲಲ್ಲಿ ನಾನು ನನ್ ಹಳೆ ಶರ್ಟು ಹಾಕ್ಕೊಂಡಿರೋದು ಈ ಜನಕ್ಕೆ ಸರಿ ಬರಲ್ವಂತೆಇದನ್ನ ಹಾಕ್ಕಮರ್ಯಾದೆ  ಅಂತಂದ.ಅಂತ ಹೇಳುತ್ತಾ  ಅವನ ಸ್ವೆಟರ್ ನ ಜೇಬಲ್ಲಿರೋ ಫೋಟೋ ತೆಗೆದು ತೋರಿಸಿದ. ಹಳೆಯ ಬ್ಲಾಕ್ ಅಂಡ್ ವೈಟ್ ಫೋಟೋ. ಅವನ ಮನೆಯ ಫೋಟೋ ಅದು. 'ಹಿಂಗಿತ್ತು ನೋಡು ಈ ಊರು. ಈ ಗವರ್ಮೆಂಟು ಅದೇನೋ ಸಿಟಿ ಕಟ್ಟುತೀನಿ ಅಂತಂತು. ದುಡ್ಡು ಕೊಡ್ತೀನಿ ಜೊತೆಗೊಂದು ಮನೇನೂ ತಗಳಿ ಅಂತಾನೂ ಅಂತು. ದೊಡ್ಡ ಮಗನೂ ಹಂಗೇ ಅಂದ. ದುಡ್ಡು ತಗೊಂಡು ಆರಾಮಾಗಿರುಇನ್ನೆಷ್ಟು ದಿನ ಗದ್ದೆ ಕೆಲ್ಸ ನಿಂಗೆ ಅಂದ. ಹೌದಲ್ವಾ ಅಂತನಿಸ್ತು. ಜಾಗ ಕೊಟ್ಟೆ. ನನ್ನ ಊರವ್ರೆಲ್ಲಾ ಜಾಗ ಕೊಟ್ರು. ಕೊಡದೇ ಇರೋ ಹಾಗೂ ಇರ್ಲಿಲ್ಲ.  ನನ್ ಎದುರಿಗೇ ಬುಲ್ದೋಜರ್ ಹತ್ತಿಸಿ ಮನೆ ಒಡೆದ್ರು. ಗದ್ದೆ ಮೇಲೆ ರೋಲರ್ ಓಡಾಡ್ತು. ಹೋಗಿದ್ದು ಹೋಯ್ತು,  ನನ್ನದಲ್ಲ ಅಂದಮೇಲೆ ನಾನ್ಯಾಕೆ ತಲೆ ಕೆಡಿಸ್ಕೋಬೇಕು ಅಂತ ಎಲ್ರೂ ಹೇಳಿದ್ರು. ನನ್ನದಲ್ಲ ನಿಜ.  ದುಡ್ಡು ಕೊಟ್ಟಿದಾರೆಮನೆ ಕೊಟ್ಟಿದಾರೆ. ಆದರೆ ಏನ್ ಮಾಡ್ಲಿ..  ಮನೇಲಿ ಕೂತ್ರೆ ಹೊತ್ ಹೋಗಲ್ಲ. ನಿದ್ದೆಯಿಂದ ಎಚ್ಚರ ಆದ್ರೆ ಹಿಂಸೆ ಆಗತ್ತೆ. ಅದಕ್ಕೆ ಈ ರೈಲು ಹತ್ತಿ ಕೂತುಬಿಡ್ತೀನಿ. ಗದ್ದೆಮನೆಮಕ್ಕಳು ಎಲ್ಲಾ  ನೆನಪಾಗತ್ತೆ. ಜೊತೆಗೆ ಒಂದೆರಡು ಸಣ್ಣ ನಿದ್ದೆನೂ ಇಲ್ಲೇ. ರಾತ್ರಿ ಮತ್ತೆ ಮನೆ. ಬೆಳಿಗ್ಗೆ ಮತ್ತೆ ಇದೇ ರೈಲು. ಮನೆಗದ್ದೆಮಕ್ಕಳುನೆನಪು.. ಎಲ್ಲವೂ ಬೇಕಲ್ವಾ ಉಸಿರು ಹಿಡಿಕೊಂಡು ಇರೋಕೆ... ಸಿಟಿ ಕಟ್ಕೊಂಡು ನಮ್ಮನ್ನೆಲ್ಲಾ ಮೂಲೆಗೆ ಸರಿಸಿ ಖುಷಿಯಾಗಿದಾರೆ ಎಲ್ಲಾಅಂತ ಹೇಳಿ ಮತ್ತೆ ಮೌನವಾದ.

          ಸಮೀರನಿಗೆ ಏನು ಹೇಳಬೇಕೋ ತೋಚಲಿಲ್ಲ. ವರ್ಷಗಟ್ಟಲೇ ಕಾದು ಸಿಕ್ಕ ಕೆಲಸ ಇದು. ಇಕೋ ಸಿಟಿಆಟೋ ಸಿಟಿ ಎಲ್ಲಾ ನೀರ್ಮಾಣವಾಗದಿದ್ದರೆತಾನು ಎಲ್ಲಿರುತ್ತಿದ್ದೆವಯಸ್ಸಾದ ಮೇಲೆ ಏನು ಮಾಡುತ್ತಿರುತ್ತಿದ್ದೆಮನೆಯೂ ಇಲ್ಲದೆಗದ್ದೆಯೂ ಇಲ್ಲದೆ ರಸ್ತೆ ಪಾಲಾಗಿರುತ್ತಿದ್ದೆ ಅಲ್ಲವಾಕೆಲಸ ಸಿಗದೇ ನನ್ನ ಮದುವೆ ಆಗುತ್ತಿತ್ತಾಮಕ್ಕಳೇ ಇರ್ತೀರ್ಲಿಲ್ಲ! ನನಗೂ ಒಂದು ಊರಿದೆ. ಅದನ್ನ ಬಿಟ್ಟು ಎಷ್ಟೋ ವರ್ಷ ಆಯ್ತು. ಕೆಲಸ ಇಲ್ಲದೇ ಊರಿಗೆ ಹೋದ್ರೆ ನೆನಪಲ್ಲ.. ಬರೀ ಊರವರ ಮುಂದೆ ನಗೆಪಾಟಲು. ಊರಲ್ಲಿದ್ದರೆ ಉಪಯೋಗಕ್ಕೆ ಬಾರದವ ಅಂತ ಯಾರ್ಯಾರದೋ ಬಾಯಲ್ಲಿ ಕೇಳಬೇಕಾಗುತ್ತೆ ಅಂತ ಹತ್ತಿರದ ಧಾರವಾಡದಲ್ಲೊಂದು ಸಾವಿರ ರೂಪಾಯಿ ಬಾಡಿಗೆಗೆ ರೂಂ ಮಾಡಿಅಪ್ಪನಿಗೆ ದುಡ್ಡು ಕೇಳೋದು ಮುಜುಗರ ಅನಿಸಿದಾಗಲೆಲ್ಲಾ ಅಲ್ಲೇ ಯಾವುದೋ ಖಾನಾವಳಿಯಲ್ಲಿ ಸಪ್ಲೈಯರ್ ಕೆಲಸಕ್ಕೆ ಸೇರಿಕೊಂಡುಮದುವೆ ಮನೆ ಕಂಟ್ರಾಕ್ಟರ್ಗೆ ಸಲಾಂ ಹೊಡೆದುಕೊಂಡು ಯಾವುದೋ ಮದುವೆಯಿದ್ದರೆ ಅಲ್ಲಿ ಬಡಿಸುವ ಕೆಲಸ ಗಿಟ್ಟಿಸಿಕೊಂಡು ಊಟಕ್ಕೆಬಾಡಿಗೆಗೆ ಒಂದಿಷ್ಟು ದುಡ್ಡು ಹೊಂದಿಸಿದಿನಾಲೂ ಕೆಲಸಕ್ಕೆ ಅಲೆಯುತ್ತಿದ್ದ ದಿನಗಳು ತುಂಬಾ ಹಿಂದಿನದೇನು ಅಲ್ಲ. ನಿನ್ನೆಯವರಗೂ ಅದೇ. ಮೊನ್ನೆ ಪೊಸ್ಟಿನಲ್ಲಿ ತನ್ನ ರೂಮಿಗೆ ಹೊಸ ಕಂಪನಿಯ ಕೆಲಸದ ಆಫರ್ ಲೆಟರ್ ಬರದೇ ಹೋಗಿದ್ದಿದ್ದರೆ  ಇಷ್ಟು ಹೊತ್ತಿಗೆ ಖಾನಾವಳಿಯಲ್ಲಿ ಸೊಪ್ಪಿನ ಪಲ್ಯ ಬಡಿಸಿಕೊಂಡುಅದು ನಿಧಾನವಾದರೆ ಅವರ ಕೈಲಿ ಬೈಸಿಕೊಂಡು ಕೂತಿರುವ ಯೋಚನೆ ಕಣ್ಣ ಮುಂದೆ ಸುಳಿಯಿತು. ಯಾವುದೇ ಕಾರಣಕ್ಕೆ ಮತ್ತೆ ಆ ದಿನಗಳ ಯೋಚನೆ ಬೇಡ ಅಂತ ಅದನ್ನ ದೂರ ಮಾಡುವ ಪ್ರಯತ್ನ ಮಾಡಿದ. ರೈಲಿನಲ್ಲಿ ಕಣ್ಣಾಡಿಸಿದ. ಪ್ರತಿ ಐದೈದು ನಿಮಿಷಕ್ಕೆ  ರೈಲಿದ್ದರೂ ತುಂಬಿರುವ ಬೋಗಿ. ಇವರೆಲ್ಲರಿಗೂ ತನ್ನಂತೇ ಹೊಸ ಕನಸು ಕಟ್ಟಿ ಕೊಟ್ಟ ಊರಲ್ಲವಾ? ಸಮೀರನಿಗೆ ಇಷ್ಟು ಹೊತ್ತು ಈ ಮುದುಕ ಮಾತ್ರ ತನ್ನವ ಅಂತನಿಸುತ್ತಿತ್ತು. ಆದರೆ ಅವನ ಕೊರಗುವಿಕೆ ಕೇಳಿಸಿಕೊಂಡ ಮೇಲೆ, ತನ್ನ ನೆನಪುಗಳನ್ನ ಹಾಳು ಮಾಡಿದ್ದಕ್ಕೆ ನಗರಕ್ಕೆ ಬಯ್ಯುತ್ತಿದ್ದ ಮುದುಕನ್ನೊಬ್ಬನನ್ನ ಬಿಟ್ಟು  ಉಳಿದವರೆಲ್ಲರೂ ತನ್ನವರು ಅನ್ನಿಸಲು ಶುರುವಾಯಿತು. ಮುದುಕನ ಮಾತುಗಳಿಗೆ ಅರ್ಥ ಇಲ್ಲ ಅಂತನಿಸಿ ಅವನ ಬಳಿ ಮಾತನಾಡುವುದು ನಿಲ್ಲಿಸಿದ.  ಇಬ್ಬರೂ ಕಿಟಕಿಯಾಚೆಗೆ ದೃಷ್ಟಿಯಿಟ್ಟರು. ಒಬ್ಬ ಕನಸುಗಳತ್ತ. ಇನ್ನೊಬ್ಬ ನೆನಪುಗಳತ್ತ. 

          ಮಾರನೆಯ ದಿನ ಬೆಳಿಗ್ಗೆ ಸಮೀರ ರೈಲು ಹತ್ತಿದಾಗ, ರೈಲು ತುಂಬಿತ್ತು. ಬಾಗಿಲ ಬಳಿಯೇ ನಿಂತುಕೊಂಡ ಸಮೀರ. ಆ ಮುದುಕ ಎಂದಿನಂತೆ ಅದೇ ಸೀಟಿನಲ್ಲಿ ಕೂತಿದ್ದ, ಸೀಟಿನ ಪಕ್ಕದ ಗಾಜಿಗೆ ಒರಗಿಕೊಂಡು. ಆ ಮುದುಕನ ಕಡೆಗೆ ನೋಡಿ ಕೈ ಬೀಸಿದ. ಮುದುಕ ಇತ್ತ ನೋಡಲೂ ಇಲ್ಲ. 

          ಸಮಯಕ್ಕೆ ಸರಿಯಾಗಿ, ಒಂದು ಗಂಟೆಯಲ್ಲಿ ಸಮೀರನ ಕಾರ್ಖಾನೆಯ ಸ್ಟಾಪ್ ಬಂದಿತ್ತು. ಇಳಿದುಕೊಂಡ. ಯಾವುದೋ ಟ್ರೈನಿಂಗಿಗೆ ಕಳಿಸಿದರು. ಅಲ್ಲಿ ಇಡೀ ಸಿಟಿಯ ಪರಿಚಯ ಮಾಡಿಸಲಾಯ್ತು. "ನಗರದ ಒಳಗೆ ಇನ್ನೊಂದಿಷ್ಟು ನಗರಗಳು. ಶಾಪಿಂಗಿಗೆ ಎಂದೇ ಒಂದು ಸಣ್ಣ ನಗರ. ಎಲ್ಲಾ ತರಹದ ಮಾಲುಗಳು, ಸೂಪರ್ ಮಾರ್ಕೆಟ್ ಗಳು, ಮಲ್ಟಿಪ್ಲೆಕ್ಸುಗಳು ಅಲ್ಲಿ. ಲೆಕ್ಕವಿಲ್ಲದಷ್ಟು ಟೆನ್ನಿಸ್ ಕೋರ್ಟು, ಕ್ರಿಕೆಟ್ ಗ್ರೌಂಡು, ಫುಟ್ಬಾಲ್ ಗ್ರೌಂಡುಗಳು, ಇಂಡೋರ್ ಸ್ಟೇಡಿಯಂಗಳು, ಆಟದ ಟೂರ್ನಮೆಂಟುಗಳು ನಡೆಸೋದಕ್ಕೆ ಸ್ಪೋರ್ಟ್ಸ್ ಕಾಂಪ್ಲೆಕ್ಸ್. ಕಿರಾಣಿ ಪದಾರ್ಥಗಳೆಲ್ಲಾ ಇಲ್ಲೇ ತಯಾರಾಗುತ್ತದೆ ಫುಡ್ ಪ್ರೊಸೆಸಿಂಗ್ ಸಿಟಿಯಲ್ಲಿ. ಅದಕ್ಕೆ ಬೇಕಾದ ಸಾಮಾನು ಸರಂಜಾಮುಗಳೆಲ್ಲಾ ಅಗ್ರಿ ಸಿಟಿಯಿಂದ ಸಪ್ಲೈ ಆಗುತ್ತದೆ. ಅಗ್ರಿ ಸಿಟಿಯನ್ನೂ ಒಂದು ಹತ್ತು ಕಂಪನಿಗಳು ನೋಡಿಕೊಳ್ಳುತ್ತಿದೆ. ಯಾರು ಏನು ಬೆಳೆಯಬೇಕು, ಎಷ್ಟು ಬೆಳೆಯಬೇಕು ಎಲ್ಲವೂ ಕಂಪನಿ ನಿರ್ಧಾರ ಮಾಡುತ್ತದೆ. ಎಲ್ಲರಿಗೂ ಉಳಿದುಕೊಳ್ಳಲು ರೆಸಿಡೆನ್ಷಿಯಲ್ ಸಿಟಿಯಲ್ಲಿ ವ್ಯವಸ್ಥೆ ಇದೆ. ನಗರದ ತುಂಬೆಲ್ಲಾ ಎಲ್ಲಾ ದಿಕ್ಕಿನಲ್ಲೂ ಒಂದೊಂದು ರೆಸಿಡೆನ್ಷಿಯಲ್ ಸಿಟಿ. ನಿಮಗೆ ಬೇಕಾಗಿರೋ ಎಲ್ಲವನ್ನೂ ಈ ಸಿಟಿ ನೋಡಿಕುಳ್ಳುತ್ತದೆ" ಅಂತೆಲ್ಲಾ ಟ್ರೈನಿಂಗಿನಲ್ಲಿ ಹೇಳುತ್ತಿದ್ದರೆ, ಇದನ್ನೆಲ್ಲಾ ಕೇಳಿದ ಸಮೀರ ಕೂತಲ್ಲೆ  ಕಂಪಿಸುತ್ತಿದ್ದ. ಹೀಗೆಲ್ಲಾ ಇರಬಹುದು ಅನ್ನೋ ಯೋಚನೆಯೇ ಅವನ ತಲೆಯ ಒಳಗೆ ಸುಲಭಕ್ಕೆ ಇಳಿಯುತ್ತಿರಲಿಲ್ಲ. 

          ಇಡೀ ದಿನ ಇನ್ನೂ ಒಂದಿಷ್ಟು ಟ್ರೈನಿಂಗ್ ಮುಗಿಸಿ ಮತ್ತೆ ವಾಪಸ್ ಟ್ರೈನು ಹತ್ತಿದ. ಸುಸ್ತು ಆವರಿಸಿತ್ತು. ಚಿಕ್ಕದೊಂದು ನಿದ್ರೆ ಮಾಡಿ ಎದ್ದಾಗ ಆಗಲೇ ಅವನ ಸ್ಟಾಪ್ ಬಂದಿತ್ತು. ಅವಸರದಲ್ಲಿ ರೈಲಿನಿಂದ ಇಳಿದುಕೊಂಡ. ರೈಲಿನಿಂದ ಹೊರಬಂದ ಮೇಲೆ  ಆ ಮುದುಕನನ್ನ ನೋಡಲೇ ಇಲ್ಲವಲ್ಲಾ ಇವತ್ತು ಅಂತ  ಕುತೂಹಲಕ್ಕೆ ರೈಲಿನ ಒಳಗೊಮ್ಮೆ ದೃಷ್ಟಿ ಹರಿಸಿದ ಅವನ ಖಾಯಂ ಸೀಟಿನ ಕಡೆಗೆ. ನೆನಪು, ಮಕ್ಕಳು, ಮನೆ ಅಂತ ಕೊರಗುತ್ತಾ ಕೂತಿರಬೇಕು ಯಾವತ್ತಿನಂತೆ ಅಂತ ಮನಸ್ಸಲ್ಲೇ ನಕ್ಕ. ಕಿಟಕಿಯ ಹೊರಗಿಂದಲೇ ಮತ್ತೆ ಕೈ ಬೀಸುವ ಪ್ರಯತ್ನ ಮಾಡಿದ, ಈ ಕಡೆ ತಿರುಗಿದರೆ ನೋಡಲಿ ಅಂತ. ಆ ಮುದುಕ ಇವನ ಕಡೆ ತಿರುಗಲೇ ಇಲ್ಲ. ರೈಲು ಮತ್ತೆ ಹೊರಟು ಹೋಯಿತು. ತಕ್ಷಣ ಸಮೀರನ ತಲೆಯಲ್ಲಿ ಒಂದು  ಯೋಚನೆ ಹೊಕ್ಕಿತು. ಬೆಳಿಗ್ಗೆ ಅವನನ್ನ ರೈಲಿನ ಬಾಗಿಲ ಬಳಿಯಿಂದ ನೋಡಿದ್ದು ನೆನಪಾಯಿತು. ಆ ಮುದುಕ ಬೆಳಿಗ್ಗೆ ಹೇಗೆ ಕುಳಿತಿದ್ದನೋ ಹಾಗೇ ಇದ್ದಾನಲ್ಲವಾ? ಬೆಳಿಗ್ಗೆಯೂ ತಲೆ ತಗ್ಗಿಸಿ ಗಾಜಿಗೆ ಒರಗಿಕೊಂಡು, ಈಗಲೂ ಹಾಗೆಯೇ. ಮುದುಕ ಸುಮ್ಮನೇ ಮಲಗಿದ್ದಷ್ಟೇ ಇರಬಹುದಾ? ಮನೆಯ ಕಡೆಗೆ ಹೋಗಲು ಯಾಕೋ ಮನಸ್ಸು ಒಪ್ಪಲಿಲ್ಲ. ಇನ್ನೊಂದು ರೈಲು ಹತ್ತಿ ಹೊರಟರೆ ಅದು ಅಲ್ಲಿ ಹೋಗಿ ಮುಟ್ಟುವಷ್ಟರಲ್ಲಿ ಮತ್ತೆ ಈ ರೈಲು ವಾಪಸ್ ಬಂದಿರುತ್ತೆ. ಅನುಮಾನಗಳು ನಿಜವಾಗದಿರಲಿ ಅಂತ ಬೇಡಿಕೊಂಡ. ಮತ್ತೆ ಆ ರೈಲು ಬರಲು ಎರಡು ಗಂಟೆ ಬೇಕು ಅಂತ ಗೊತ್ತಿದ್ದರೂ  ಬಂದು ಹೋಗುವ ಎಲ್ಲಾ ರೈಲುಗಳ ಕಿಟಕಿಯೊಳಗೆ ದೃಷ್ಟಿ ಹಾಯಿಸಿ ಮುದುಕನನ್ನ ಹುಡುಕುತ್ತಿದ್ದ. ಕೊನೆಗೂ ಆ ಮುದುಕ ಮತ್ತೆ ಕಂಡ. ತಕ್ಷಣ ಒಳಹೊಕ್ಕ ಸಮೀರ ಆ ಸೀಟಿನ ಪಕ್ಕ ಕೂತು ಮಾತಾಡಿಸುವ ಪ್ರಯತ್ನ ಮಾಡಿದ. ಉತ್ತರವಿಲ್ಲ. ಕೈ ಹಿಡಿದು ತಳ್ಳಿದ. ಅನುಮಾನ ನಿಜವಾಗಿತ್ತು. ತಕ್ಷಣ ಎಮರ್ಜೆನ್ಸೀ ನಂಬರ್ ಗೆ ಫೋನ್ ಮಾಡಿ ವಿವರಿಸಿದ. ಇಕೋ ಸಿಟಿಯ ಪೊಲೀಸರು ಹತ್ತೇ ನಿಮಿಷದಲ್ಲಿ ಅಲ್ಲಿದ್ದರು. ಆಂಬ್ಯುಲೆನ್ಸ್ ಕೂಡ.

         
          "ಆ ಮುದುಕನ ಪರಿಚಯ ಇದೆಯಾ" ಪೊಲೀಸರು ಸಮೀರನಿಗೆ ಪ್ರಶ್ನೆಗಳನ್ನ ಹಾಕಲು ಶುರು ಮಾಡಿದರು. 
          "ಹೌದು" -  ತನ್ನ ಕಥೆ ಹೇಳಿಕೊಂಡ ಅಂದರೆ ಪರಿಚಯ ಇತ್ತು ಅಂತಲೇ ಅಲ್ಲವಾ? ಹೌದು ಅಂದ. 

          "ಮನೆ ಎಲ್ಲಿ ಈ ತಾತಂದು?" 
           "ಗೊತ್ತಿಲ್ಲ" - ಅವನ ಜೇಬಿನಲ್ಲಿ ಒಂದು ಹಳೆಯ ಫೋಟೋ ಇದೆ. ಅದು ಅವನ ಹಳೆಯ ಮನೆ. ಆ ಮುದುಕ ಇನ್ನೂ ಮನೆಯೆಲ್ಲಿ ಅಂದರೆ ಅದನ್ನೇ ತೋರಿಸುತ್ತಾನೆ. ಹೊಸದು ಉಳಿದುಕೊಳ್ಳೋಕೆ ಜಾಗವಷ್ಟೆ ಅವನಿಗೆ. ಮನೆಯಲ್ಲ. ಹಳೆಯ ಫೋಟೋ ಪೊಲೀಸರಿಗೆ ತೋರಿಸಿದರೆ ಹುಚ್ಚ ಅಂತ ತಲೆ ಪಟ್ಟಿ. ಮನೆ ಎಲ್ಲಿ?   ಗೊತ್ತಿಲ್ಲ.  

           "ಮತ್ತೆ ಯಾರಾದರೂ ಪರಿಚಯದವರು? ಮಕ್ಕಳು? ಯಾವದಾದ್ರೂ ಫೋನ್ ನಂಬರ್ರು? "
          "ಇಲ್ಲ" - ಆ ಮುದುಕ ಯಾರ ಬಳಿಯೂ ಮಾತಾಡಿದ್ದು ನೋಡಿಲ್ಲ. ಮಕ್ಕಳು ಭೇಟಿಯಾಗಿ ಎಷ್ಟು ವರ್ಷವಾಗಿರಬಹುದೋ? ಬರೀ ಅವನ ನೆನಪಲ್ಲಿ ಮಾತ್ರ ಕಾಣುತ್ತಿದ್ದರಾ? ಯಾಕಿಂಥ ಯೋಚನೆ? ಬಂದು ಹೋಗಿ ಮಾಡುತ್ತಿದ್ದರೇನೋ, ಗೊತ್ತಿಲ್ಲ.  "ಇಲ್ಲ. ಆ ಮುದುಕನ ಯಾವ ಪರಿಚಯಸ್ಥರೂ ಗೊತ್ತಿಲ್ಲ. ಒಬ್ಬ ಮಗ ಮುಂಬೈ ಲಿ ಇನ್ನೊಬ್ಬ ಚೆನ್ನೈಲಿ. ಅಷ್ಟೇ ಗೊತ್ತಿರೋದು" 

           ಸಮೀರನನ್ನ ಇನ್ನೂ ಕೇಳುವುದು ಸುಮ್ಮನೇ ದಂಡ ಅಂತ ಭಾವಿಸಿದ ಇನ್ಸ್ಪೆಕ್ಟರ್ ಅಲ್ಲಿಂದ ಹೊರಟ.  ಆಂಬ್ಯುಲೆನ್ಸಿನಲ್ಲಿ ಮುದುಕನನ್ನ  ಹತ್ತಿಸಿಕೊಳ್ಳಲಾಯಿತು. ಸಮೀರನೂ ಜೊತೆಗೇ ಹೋದ. ಸಿ‌ಸಿ ಟಿವಿಯ ಮುಖಾಂತರ ಆ ಮುದುಕ ದಿನಾಲೂ ಬರುತ್ತಿದ್ದ ದಾರಿಯನ್ನ ಟ್ರಾಕ್ ಮಾಡಿ ಕೊನೆಗೂ ಅವನ ಮನೆ ಕಂಡು ಹಿಡಿಯಲಾಯಿತು. ಮುನ್ನೂರು ಮನೆಗಳ ಬಿಲ್ಡಿಂಗಿನಲ್ಲಿ ಚಿಕ್ಕದೊಂದು ಮನೆ. ಅಲ್ಲೇ ಹಾಲ್ ನಲ್ಲಿ ಒಂದು ಚಾಪೆ ದಿಂಬು. ತಾಗಿಕೊಂಡಿರುವ ಅಡಿಗೆ ಮನೆಯಲ್ಲಿ ಒಂದಿಷ್ಟು ಪಾತ್ರೆಗಳು. ಮಗನ ಮದುವೆಯ ಅಲ್ಬಮ್ಮು. ಮತ್ಯಾವ ವಿವರಗಳೂ ಸಿಗಲಿಲ್ಲ. ಅಲ್ಲೇ ಅಕ್ಕಪಕ್ಕದ ಮನೆಗಳಲ್ಲಿ ಅವನ ಬಗ್ಗೆ ವಿಚಾರಿಸಲಾಯಿತು. ಬೆಳಿಗ್ಗೆ ಹೋದರೆ ದಿನಾ ರಾತ್ರಿ ಬರ್ತಾನೆ ಮನೆಗೆ ಅನ್ನೋದು ಬಿಟ್ಟು ಬೇರೇನೂ ಗೊತ್ತಾಗಲಿಲ್ಲ. ಮುಂಚೆಯಿಂದ ಆ ಮುದುಕನ ಬಗ್ಗೆ ಪರಿಚಯವಿದ್ದವರೂ ಯಾರೂ ಸಿಗಲಿಲ್ಲ. ಅಪಾರ್ಟ್ಮೆಂಟ್ ಬಿಲ್ಡಿಂಗಿನಲ್ಲಿ ಇವನ ಫೋಟೋ ನೋಟಿಸ್ ಹಾಕಲಾಯ್ತು. ಆಸ್ಪತ್ರೆಯಿಂದ ಪೋಸ್ಟ್ ಮಾರ್ಟಮ್ ರಿಪೋರ್ಟ್ ಬಂದಿತ್ತು. ಮುದುಕ ಹೃದಯಾಘಾತದಿಂದ ಸತ್ತಿದ್ದಾನೆ. ಆಸ್ಪತ್ರೆಗೆ ತಂದಾಗ ಸತ್ತು ಹದಿನಾಲ್ಕು ಗಂಟೆ ಕಳೆದಿದೆ. ಬೆಳಗಿನ ಜಾವ ಸುಮಾರು ಐದು ಗಂಟೆಯ ಹೊತ್ತಲ್ಲಿ ಪ್ರಾಣ ಬಿಟ್ಟಿರಬಹುದು ಅಂತ ಡಾಕ್ಟರ್ ಹೇಳಿದ್ದರು.

          ಇಡೀ ದಿನ ಆ ಮುದುಕ ಆ ಟ್ರೈನಿನಲ್ಲಿ ಹೆಣವಾಗೇ ಕೂತಿದ್ದನಾ? ಯಾರೂ ಮಾತನಾಡಿಸಲು ಪ್ರಯತ್ನಿಸಲಿಲ್ಲವಾ? ತಾನಾದರೂ ಬೆಳಿಗ್ಗೆ ಮುದುಕನನ್ನ ಮಾತಾಡಿಸೋಕೆ ಇನ್ನೊಂದಿಷ್ಟು ಪ್ರಯತ್ನ ಮಾಡಿದ್ದರೆ! ತಕ್ಷಣ ಗೊತ್ತಾಗಿ ಆಸ್ಪತ್ರೆ ಸೇರಿಸಿದ್ದರೆ? ಯೋಚನೆಗಳು ಬಂದವು.

          ಅಮ್ಮ ನೆನಪಾದಳು. ಅಲ್ಲಿಂದಲೇ ಅವಳಿಗೊಂದು ಫೋನ್ ಮಾಡಿದ. 'ಹೆಂಗಿದೆ ಮಗಾ ಹೊಸಾ ಊರೂ?' ಕೇಳಿತ್ತು ಅತ್ತಲಿಂದ ಅಮ್ಮನ ಧ್ವನಿ. ಸತ್ರೂ ಕೇಳವ್ರಿಲ್ಲ ಈ ಊರಲ್ಲಿ ಅಂತ ಬಾಯಿ ತುದಿಗೆ ಬಂದ ಮಾತು ಹಾಗೆಯೇ ಅಲ್ಲಿಯೇ ಉಳಿದುಕೊಂಡಿತು. "ತುಂಬಾ ಚಂದ ಇದೆ, ನಂಗೆ ಕೆಲ್ಸಾನೇ ಸಿಗಲ್ವೇನೋ ಅಂದ್ಕಂಡಿದ್ದೆ... ಅಂತೂ ನಿನ್ ಆಸೆ ತೀರ್ತು ನೋಡು.. ನಿನ್ನ ಮಗ ಇನ್ನು ನಿನ್ ಕೈಗೆ ಸಿಕ್ಕಲ್ಲ.." ಅಂದ. ಅಮ್ಮ ಸುಮಾರು ದಿನದ ಬಳಿಕ ಖುಷಿಯಾಗಿದ್ದಂತೆ ಕಂಡಿತು. ಯಾಕೋ ಮುಂದೆ ಮಾತಾಡಲಾಗಲಿಲ್ಲ ಸಮೀರನಿಗೆ. ಫೋನ್ ಕಟ್ ಮಾಡಿದ. 

          ಒಂದು ದಿನ ಕಾದರು. ಮುದುಕನ ಹೆಣ ನೋಡಲು ಯಾರೂ ಬರಲಿಲ್ಲ. ಮಾರನೆಯ ದಿನ ವಿದ್ಯುತ್ ಚಿತಾಗಾರದಲ್ಲಿ ಸುಡಲಾಯ್ತು. ಸಮೀರನೂ ಕೆಲಸಕ್ಕೆ ಹೋಗಬೇಕಾದ ಕಾರಣ ಆ ಮುದುಕನನ್ನ ಸುಡುವಾಗ ಜೊತೆಯಿರಲಿಲ್ಲ.  ವಾಪಸ್ ಬಂದವನೇ ಚಿತಾಗಾರದ ಮುಂದೆ ಸುಮ್ಮನೇ ಕುಳಿತುಬಿಟ್ಟ. ಕಣ್ಣೀರು ತಾನೇ ತಾನಾಗಿ ಹರಿದಿತ್ತು.  

          ರೈಲು ಬಂದು ಹೋಗುವುದು ಮಾಡುತ್ತಲೇ ಇತ್ತು. ಎಷ್ಟೋ ಜನ ಇಳಿದುಕೊಂಡು ಎತ್ತಲೋ ಹೊರಡುತ್ತಿದ್ದರು. ಇನ್ನೊಂದಿಷ್ಟು ಜನ ಬಂದು ಹತ್ತುತ್ತಿದ್ದರು. ಮಾರನೆಯ ದಿನ ಬೆಳಿಗ್ಗೆ  ರೈಲು ಹತ್ತಿದ ಸಮೀರ ಮುದುಕನ ಸೀಟಲ್ಲಿ ಕೂತ. ಕಿಟಕಿಯಾಚೆಗೆ ಗದ್ದೆ, ಸ್ಕೂಲು, ಮನೆ, ಹುಡುಗರು, ಅವರ ಆಟ, ಜಗಳ, ನಗು ಎಲ್ಲವೂ ಕಂಡವು. ಫಸಲಿನ ಮೇಲೆ ಬೂಟುಗಾಲಲ್ಲಿ ಓಡುತ್ತಿರುವವರೂ ಕಂಡರು. ಬರಿಗಾಲಲ್ಲಿ ಓಡುವವರೂ. ಸಮೀರನೂ ಗುಂಪಲ್ಲಿ  ಓಡುತ್ತಿದ್ದ.   


BD15132_


ಮೇ 28, 2014

ಅಟ್ಲಾಂಟಿಕ್ ಸಿಟಿ







ಪೂರ್ವ ತೀರದ ಲಾಸ್ ವೇಗಸ್ ಅಂತ ಕರೆಸಿಕೊಳ್ಳುವ ಅಟ್ಲಾಂಟಿಕ್ ಸಿಟಿ ನೋಡುವುದೆಂದು ತೀರ್ಮಾನಿಸಿ ಹೊರಟಾಗಿತ್ತು. ಸ್ಟಾಂಫೋರ್ಡ್  ನಗರದಿಂದ ಅಟ್ಲಾಂಟಿಕ್ ಸಿಟಿ ಗೆ ಸುಮಾರು ಮೂರು ಗಂಟೆಗಳ ಪ್ರಯಾಣ. ಎಕ್ಸ್ಪ್ರೆಸ್ ವೇನಲ್ಲಿ ಗಂಟೆಗೆ ೧೦೦ - ೧೨೦ ಕಿಲೋಮೀಟರು ವೇಗದಲ್ಲಿ ಸರಾಗವಾಗಿ ಚಲಿಸುತ್ತಿದ್ದ ಕಾರು, ಅಪರೂಪಕ್ಕೆ ಸಿಕ್ಕಿರೋ ಕನ್ನಡ ಹುಡುಗರ ದಂಡು, ಕಾರಿನ ಸ್ಟೀರಿಯೋದಿಂದ ಹೊರಹೊಮ್ಮುತ್ತಿದ್ದ 'ಬಾನಿಗೊಂದು ಎಲ್ಲೆ ಎಲ್ಲಿದೆ.. ನಿನ್ನಾಸೆಗೆಲ್ಲಿ ಕೊನೆಯಿದೆ.. ' ಹಾಡು, ಜೊತೆಗೆ ಅಟ್ಲಾಂಟಿಕ್ ಸಿಟಿಯ ಬಗ್ಗೆ ಚಿಕ್ಕದೊಂದು ಕುತೂಹಲ ಆ ವೀಕೆಂಡ್ ಗೆ ಹೊಸ ಉತ್ಸಾಹವನ್ನಂತೂ ತಂದಿತ್ತು. ಕನ್ನಡ ಹಾಡುಗಳನ್ನ ಕೇಳುತ್ತಾ, ಗೆಳೆಯರೊಂದಿಗೆ ಊರು, ಬೆಂಗಳೂರು, ಕೆಲಸ ಹೀಗೆ ಹರಟುವಷ್ಟರಲ್ಲಾಗಲೇ ಅಟ್ಲಾಂಟಿಕ್ ಸಿಟಿಯ ಸಮುದ್ರ ತೀರ ನಮ್ಮನ್ನ ಬರಮಾಡಿಕೊಂಡಿತ್ತು. ಅಲ್ಲಿಗೆ ಬಂದಾಗ ಸಂಜೆ ೪ ಗಂಟೆ. ಸೂರ್ಯ ಇನ್ನೂ ಸುಡುತ್ತಲೇ ಇದ್ದ.  ಬೇಸಿಗೆಯಲ್ಲಿ ಅಮೆರಿಕಾದ ಪೂರ್ವ ತೀರದ ಪ್ರದೇಶಗಳಲ್ಲಿ ಕತ್ತಲಾಗುವುದು ಎಂಟು ಗಂಟೆಯ ಮೇಲೆಯೇ ಆದ್ದರಿಂದ ಅವಾಗಿನ್ನೂ ಮಧ್ಯಾಹ್ನದ ಲೆಕ್ಕ. 



                                     


ಅಟ್ಲಾಂಟಿಕ್ ಸಿಟಿಯ ಪ್ರಮುಖ ಆಕರ್ಷಣೆಗಳೆಂದರೆ ಅಲ್ಲಿನ ಸಮುದ್ರ ತೀರ, ಪ್ರಸಿದ್ದ ಬೋರ್ಡ್ ವಾಕ್ ಮತ್ತು ಕ್ಯಾಸಿನೊ, ನೈಟ್ ಕ್ಲಬ್ ಗಳು. ನಮ್ಮ ಸವಾರಿ ಮೊದಲು ಹೊರಟಿದ್ದು ಬೀಚಿನ ಕಡೆಗೆ. ಸಮುದ್ರ ತೀರ ಗಿಜಿಗುಡುತ್ತಿತ್ತು. ಒಂದಿಷ್ಟು ಜನ ಬಿಸಿಲಿಗೆ ಮೈ ಒಡ್ಡಿ ಕೂತಿದ್ದರೆ, ಇನ್ನೊಂದಿಷ್ಟು ಜನ ಬಿಸಿಲಿಗೆ ಅಡ್ಡಲಾಗಿ ಹಿಡಿದ ಕೊಡೆಗಳ ನೆರಳಲ್ಲಿ ವಿಶ್ರಮಿಸುತ್ತಾ ಸಮುದ್ರದ ಅಲೆಗಳನ್ನ ನೋಡುತ್ತಾ ಹೊತ್ತು ಕಳೆಯುತ್ತಿದ್ದರು. ಅಲೆಗಳ ಮೇಲೆ ಸರ್ಫಿಂಗ್ ಮಾಡುವ ಅಡ್ವೆಂಚರ್ ಪ್ರಿಯರು, ತೀರದಲ್ಲಿ ಗಾಳಿಪಟ ಹಾರಿಸುತ್ತಾ ತಮ್ಮ ಸಮಯ ಕಳೆಯ ಬಯಸುವವರು, ಸಣ್ಣ ಸಣ್ಣ ಟ್ಯೂಬಿನ ಮೇಲೆ ಲೈಫ್ ಜಾಕೆಟ್ ಹಾಕಿಕೊಂಡು ತೇಲುವ ಮಕ್ಕಳು ಇವೆಲ್ಲವನ್ನ ನೋಡುತ್ತಾ ಬೀಚಿನಲ್ಲಿ ಒಂದಿಷ್ಟು ಹೊತ್ತು ಕಳೆದು ಹೊರಟಿದ್ದು ಅಲ್ಲೇ ಇರುವ  ಚಿಕ್ಕ ಅಮ್ಯೂಸ್ಮೆಂಟ್ ಪಾರ್ಕ್ ಗೆ. 

ಡಿಸ್ನಿ ವರ್ಲ್ಡ್ ಗೆ ಅಥವಾ ನಮ್ಮ ಬೆಂಗಳೂರಿನ ವಂಡರ್ ಲಾ ಗೆ ಹೋಲಿಸಿದರೆ ತುಂಬಾ ಚಿಕ್ಕದಾದರೂ ಸಮುದ್ರದ ಮೇಲೆ ಇದನ್ನ ನಿರ್ಮಿಸಿರುವುದು ಇದರ ವಿಶೇಷ. ಎತ್ತರದ ಜೈಂಟ್ ವ್ಹೀಲ್ ಅಥವಾ ಇನ್ನಿತರ ರೈಡ್ ನಲ್ಲಿ ಕೂತರೆ ಅದು ಮೇಲಿಂದ ಕೆಳಕ್ಕೆ ವೇಗವಾಗಿ ತಿರುಗಿದಾಗ ಕೆಳಗೆ ಕಾಣುವ ಅಟ್ಲಾಂಟಿಕ್ ಮಹಾಸಾಗರ, ಮತ್ತದರ ಅಲೆಗಳು ಅನುಭವಕ್ಕೆ ಹೊಸ ಮೆರಗು ಕೊಡುತ್ತದೆ. ಜೊತೆಗೆ ಅಲ್ಲಿನ ಮತ್ತೊಂದು ಆಕರ್ಷಣೆ ಅಲ್ಲಿನ ಹೆಲಿಕಾಪ್ಟರ್  ರೌಂಡ್ಸ್. ಅಟ್ಲಾಂಟಿಕ್ ಸಿಟಿಯ ಎತ್ತರ ಕಟ್ಟಡಗಳ ಮೇಲೆ ಹಾದು ಹೋಗಿ ಸಮುದ್ರದ ಮೇಲೊಂದು ಸುತ್ತು ಹಾಕಿ ನಗರ ಪ್ರದಕ್ಷಿಣೆ ಮಾಡಿ ಬರಬಹುದು. 


ಬೋರ್ಡ್ ವಾಕ್ ನಲ್ಲಿ ಒಂದು ಸಣ್ಣ ವಾಕ್.. 


ಸಮುದ್ರದ ಮರಳು, ಬೀಚಿನ ಹೋಟೆಲುಗಳ ಮೇಲೆ ಬಾರದಿರಲೆಂದು ಸಮುದ್ರ ತೀರಕ್ಕೆ ಸಮಾನಾಂತರವಾಗಿ ಕಟ್ಟಲಾಗಿರೋ ಬೋರ್ಡ್ ವಾಕ್ ಸುಮಾರು ೪ ಮೈಲು ಉದ್ದ, ೨೪ ಅಡಿ ಅಗಲವಿದೆ. ೧೮೭೦ರಲ್ಲಿ ಕಟ್ಟಲಾಗಿದ್ದ ಈ ಹಾದಿಯನ್ನ  ಕಟ್ಟಿರೋದು ಮರದ ಹಲಗೆಗಳಿಂದ. ತುಂಬಾ ಹಳೆಯದಾದರೂ ಇದು ಇಂದಿಗೂ ಪ್ರಸಿದ್ದ. ಅಮೇರಿಕಾದ ಶ್ರೀಮಂತ ಇತಿಹಾಸಕ್ಕೆ ಸಂಕೇತವಂತೆ.  ಇದರ ಒಂದು ಬದಿಗೆ ಸಮುದ್ರದ ನೋಟವಿದ್ದರೆ, ಇನ್ನೊಂದು ಬದಿಗೆ ಒಂದಾದರ ಮೇಲೊಂದು ಶಾಪಿಂಗ್ ಮಾಲುಗಳು, ರೆಸ್ಟೋರೆಂಟ್ ಗಳು, ಕ್ಯಾಸಿನೋಗಳು, ಕ್ಲಬ್ಬುಗಳು, ಹೋಟೆಲುಗಳು ಮತ್ತಿತರ ಆಕರ್ಷಣೆಗಳು. ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ವಾಹನಗಳಿಗೆ ಪ್ರವೇಶವಿಲ್ಲ. ಒಂದು ಕಡೆ ನಿಸರ್ಗ ಸೌಂದರ್ಯವನ್ನ, ಮತ್ತೊಂದೆಡೆ ಮಾನವ ನಿರ್ಮಿತ ಸೌಂದರ್ಯವನ್ನ ಅನುಭವಿಸುತ್ತಾ ಸಾಗುವ ಈ ವಾಕ್ ನಿಜಕ್ಕೂ ಖುಷಿ ಕೊಡುತ್ತದೆ. ನಡೆದು ನಡೆದು ಸುಸ್ತಾಗಿ , ಸಂಜೆ ಹೊತ್ತಿನ ಹಿತವಾದ ತಂಗಾಳಿಯಲ್ಲಿ ಬೋರ್ಡ್ ವಾಕ್ ನ ಬದಿಯಲ್ಲಿರುವ ಬೆಂಚುಗಳ ಮೇಲೆ ಕೂತು  ಒಂಚೂರು ವಿಶ್ರಮಿಸಿ, ಮತ್ತೊಂದಿಷ್ಟು ಉತ್ಸಾಹದಿಂದ ಹೊರಟಿದ್ದು ಕ್ಯಾಸಿನೋಗಳ ಕಡೆಗೆ. 




ಇಲ್ಲೂ ಒಂದು ತಾಜ್ ಮಹಲ್ !



ಅಟ್ಲಾಂಟಿಕ್ ಸಿಟಿಗೆ ಕತ್ತಲಾದಂತೆ ಹೊಸ ಹೊಳಪು. ಕ್ಯಾಸಿನೊಗಳು ಗಿಜಿಗುಡಲು ಆರಂಭಿಸಿರುತ್ತದೆ. ಸಿಸರ್ಸ್, ಟ್ರೋಪಿಕಾನಾ, ಬೋರ್ಗಾಟ ಹೀಗೆ ಲೆಕ್ಕವಿಡಲಾಗದಷ್ಟು ಕ್ಯಾಸಿನೋಗಳು ಇಲ್ಲಿವೆ. ಅದರಲ್ಲಿ ಒಂದು ಕ್ಯಾಸಿನೋದ ಹೆಸರು ಟ್ರಂಪ್ ತಾಜ್ ಮಹಲ್.  ಮೊಗಲರ ಶೈಲಿಯ ಗುಮ್ಮಟಗಳು ಅಮೆರಿಕಾದ ಇತರ ಕಟ್ಟಡಗಳ ನಡುವಲ್ಲಿ ಎದ್ದು ಕಾಣುತ್ತದೆ.  ಒಳ ಹೊಕ್ಕರೆ ಸಾವಿರಾರು ಗೇಮ್ ಸ್ಲಾಟ್ ಮಷೀನ್ ಗಳು, ರೌಲೆಟ್, ಪೋಕರ್ ಟೇಬಲ್ ಗಳು.  ದುಡ್ಡು ಹಾಕಿ ಬಟನ್ ಒತ್ತುತ್ತಾ ತಮ್ಮ ಅದೃಷ್ಟ ಪರೀಕ್ಷೆಯಲ್ಲಿ ಜನ ಮುಳುಗಿರುತ್ತಾರೆ. ಮುಂದೆ ಕಂಪ್ಯೂಟರ್ ಪರದೆಯಲ್ಲಿ ಒಂದಿಷ್ಟು ಚಿತ್ರಗಳು ತಿರುಗುತ್ತಿರುತ್ತವೆ, ಬಟನ್ ಒತ್ತಿದಾಗ ಆ ಚಿತ್ರಗಳು ಒಂದಿಷ್ಟು ನಿಯಮದಂತೆ ಬಂದರೆ ಒಂದಿಷ್ಟು ಲಾಭ, ಇಲ್ಲವಾದರೆ ಪ್ರತಿ ಸಲ ಡಾಲರ್ ಕಳೆದುಕೊಂಡ ಬೇಸರ. ಕೊನೆಗೂ ನನ್ನ ಗೆಳೆಯನೊಬ್ಬನಿಗೆ ಅದೃಷ್ಟ ಖುಲಾಯಿಸಿ ಆ ಪ್ರವಾಸದ ಖರ್ಚೆಲ್ಲಾ ಗೆದ್ದುಕೊಂಡ. ನನ್ನ ಪಾಲಿಗೆ ಮಾತ್ರ ವಿಜಯಲಕ್ಷ್ಮಿ ಒಲಿಯಲಿಲ್ಲ. ಜೂಜಾಡುವ ಚಟವಿಲ್ಲದಿದ್ದರೂ ಎಲ್ಲಾ ಆಟದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಂತೂ ಇತ್ತು. ಅದಕ್ಕಾಗೇ ನಮ್ಮ ಸವಾರಿ ಹೊರಟಿದ್ದು ರೌಲೆಟ್ ಗೇಮ್ ನ ಕಡೆಗೆ. ಯಾವುದೋ ನಂಬರ್ ಗೆ, ಸಮ ಬೆಸ, ಬಿಳಿ, ಕಪ್ಪು ಹೀಗೆ  ತಮ್ಮ ದುಡ್ಡು ಹಾಕಿರುತ್ತಾರೆ, ಗೆಲುವಿನ ಸಾಧ್ಯತೆ ಕಡಿಮೆ ಇದ್ದು ಗೆದ್ದಷ್ಟೂ ಹೆಚ್ಚು ಲಾಭ. ಹಾಗೆಯೇ ಪಕ್ಕ ಕಣ್ಣು ಹಾಯಿಸಿದರೆ ಪೋಕರ್ ಟೇಬಲ್ ಗಳು. ಜೂಜಾಡಿ ಸುಸ್ತಾದವರಿಗೆ ಅಲ್ಲೇ ಪಾನ ಸೇವೆ ಕೂಡಾ. ಗೆದ್ದವರು ಗೆದ್ದ ಖುಷಿಯಲ್ಲಿ ಇನ್ನೊಂದು ಆಟ ಆಡಿದರೆ, ಸೋತವರು ಮುಂದಿನ ಆಟ ಗೆಲ್ಲಬಹುದೆಂದು ಮತ್ತೆ ದುಡ್ಡು ಹಾಕಿರುತ್ತಾರೆ. ಒಟ್ಟಿನಲ್ಲಿ ಮುಗಿಯದ ಆಟ. ನೆನಪಾಗಿದ್ದು ಬೆಳಿಗ್ಗೆ ಕಾರಿನಲ್ಲಿ ಕೇಳಿದ ಹಾಡು 'ನಿನ್ನಾಸೆಗೆಲ್ಲಿ ಕೊನೆಯಿದೆ... ಏಕೆ ಕನಸು ಕಾಣುವೆ...  ನಿಧಾನಿಸು...  ನಿಧಾನಿಸು.. "


ದಿನಾಲೂ ಸಾವಿರಾರು ಕೋಟಿ ವ್ಯವಹಾರ ನಡೆಯುವ ಈ ಕ್ಯಾಸಿನೋದಲ್ಲಿ ನಾವು ಹೋದಾಗ ಒಂದು ಮಿಲಿಯನ್ ಡಾಲರ್ ಕ್ಯಾಶ್ ನ ಭದ್ರ ಗಾಜಿನಲ್ಲಿ  ಪ್ರದರ್ಶನಕ್ಕೆ ಇಡಲಾಗಿತ್ತು. ಕಾಸು ಗೆಲ್ಲದಿದ್ದರೂ  ಒಮ್ಮೆಲೇ ಅಷ್ಟು ದುಡ್ಡನ್ನ ನೋಡೋ ಅದೃಷ್ಟ ಅಂತೂ ಇತ್ತು. ಎಲ್ಲಾ ಮುಗಿಸಿ ಹೊರಬರುವಷ್ಟರಲ್ಲಿ ಮುಂಜಾನೆ ನಾಲ್ಕೂವರೆ. ಇನ್ನೇನು ಹೊರಬರಬೇಕು ಅನ್ನುವಷ್ಟರಲ್ಲಿ ಕಂಡಿದ್ದು ಗೇಮ್ ಸ್ಲಾಟ್ ಮಷೀನ್ ನ ಮುಂದೆ ಕೂತು ಒಂದಿಷ್ಟು ದುಡ್ಡು ಬಾಚಿಕೊಳ್ಳುತ್ತಿದ್ದ  ೭೦ ರ ವಯಸ್ಸಿನ ಒಬ್ಬ ಅಜ್ಜಿ. ಅವಳ ಅನಿವಾರ್ಯತೆಯೋ, ಜೀವನೋತ್ಸಾಹವೋ ಗೊತ್ತಿಲ್ಲ, ಆ ವಯಸ್ಸಲ್ಲಿ, ಆ ರಾತ್ರಿಯಲ್ಲಿ ಅಲ್ಲಿ ಜೂಜಾಡುತ್ತಿದ್ದ ಅವಳ ಬಗ್ಗೆ ಸಣ್ಣದೊಂದು ಅಚ್ಚರಿ ಮೂಡಿತ್ತು. ಹೊರಬಂದಾಗ ಸೂರ್ಯಮೂಡುತ್ತಿದ್ದ. ಅಟ್ಲಾಂಟಿಕ್ ಮಹಾಸಾಗರದ ಮೇಲೆ ಸೂರ್ಯರಶ್ಮಿ. ರಾತ್ರಿ ಎಲ್ಲಾ ಜಾಗರಣೆಯಿಂದ ಮುಚ್ಚುತ್ತಿದ್ದ ಕಣ್ಣುಗಳಿಗೆ ವಿಶ್ರಾಂತಿ ಕೊಡಲು ಹೋಟೆಲ್ ನ ಕಡೆ ಹೊರಟೆವು. ಸಣ್ಣದೊಂದು ನಗರ ಕೊಟ್ಟ ಹೊಸ ಅನುಭವಗಳಿಗೆ ಧನ್ಯವಾದ ಹೇಳುತ್ತಾ. 




ಮತ್ತಿತರ ಆಕರ್ಷಣೆಗಳು
ಇನ್ನೂ ಹತ್ತು ಹಲವು ಆಕರ್ಷಣೆಗಳು ಇಲ್ಲಿವೆ. ಇಲ್ಲಿನ ಬೋರ್ಡ್ ವಾಕ್ ಹಾಲ್ ಅನ್ನೋ ಕಟ್ಟಡದ ಮೇಲೆ ಬೆಳಕಿನಾಟ ನಡೆಯುತ್ತದೆ. ಬೆಳಕಿನಲ್ಲಿ ಕಟ್ಟಡದ ಮೇಲೆ ವಿವಿಧ ಬಗೆಯ 3D ಕಲ್ಪನೆಗಳು ಮೂಡುತ್ತವೆ. ಕಟ್ಟಡ ಬಿದ್ದಂತೆ, ಡಿಸೈನ್ ಬದಲಾದಂತೆ, ರೈಲು ಕಟ್ಟಡದ ಮೂಲಕ ಹೋದಂತೆ ಇತ್ಯಾದಿ. ಯೂಟ್ಯೂಬ್ ನಲ್ಲಿ ಇದರ ವೀಡಿಯೊ ನೋಡಬಹುದು. ಲಿಂಕ್ ಇಲ್ಲಿದೆ. https://www.youtube.com/watch?v=DqhcdyUOYj0 . 

ಇದಲ್ಲದೇ ನ್ಯೂಜೆರ್ಸಿಯ ಅತಿ ಎತ್ತರದ, ಅಮೆರಿಕಾದ ಮೂರನೆ ಅತಿ ಎತ್ತರದ ಲೈಟ್ ಹೌಸ್ ಇಲ್ಲಿದೆ. ರಿಪ್ಲಿ'ಸ್ ಬಿಲೀವ್ ಇಟ್ ಆರ್ ನಾಟ್ ಮತ್ತೊಂದು ಆಕರ್ಷಣೆ, ಇಲ್ಲಿನ ಅಕ಼್ವೆರಿಯಮ್ ಮಕ್ಕಳಿಗೆ ಖುಷಿ ಕೊಡತ್ತೆ. ಬೋಟ್ ರೈಡ್ ಗಳು, ಕ್ರೂಸ್ ಗಳು ಇವೆ.


ಒಟ್ಟಿನಲ್ಲಿ ವೀಕೆಂಡ್ ನ ಖುಷಿಯಾಗಿ ಕಳೆಯೋಕೆ ಅಟ್ಲಾಂಟಿಕ್ ಸಿಟಿ ಹೇಳಿ ಮಾಡಿಸಿದಂತಿದೆ. 




- ಅಕ್ಷಯ ಪಂಡಿತ್, ಸಾಗರ 
೮/೪/೨೦೧೪


ಏಪ್ರಿಲ್ 7, 2014

ಎಲ್ಲೂ ಸಲ್ಲದವರು



[ವಿಜಯ next ಯುಗಾದಿ ಕಥಾಸ್ಪರ್ಧೆ ೨೦೧೪ ರಲ್ಲಿ ಮೊದಲ ಬಹುಮಾನ ಪಡೆದ ಕಥೆ. ವಿಜಯ next ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ ]


ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯೊಂದರ ಕ್ಯುಬಿಕಲ್ ಗೂ ಕಮ್ಮರಡಿ ಊರಿನ ನೆನಪುಗಳಿಗೂ ಗೂಗಲ್ ಮ್ಯಾಪ್ ಸೇತುವೆಯಾಗಿತ್ತು. ಗೂಗಲ್ ಮ್ಯಾಪಿನಲ್ಲಿ "ಕಮ್ಮರಡಿ, ಕರ್ನಾಟಕ" ಅಂತ ಸರ್ಚ್ ಮಾಡಿದ ವಿಶ್ವನಿಗೆ ಕಂಡಿದ್ದು, ತ್ರಿಕೋನದ ಕೇಂದ್ರ ಬಿಂದುವಿನಿಂದ ಮೂರೂ ದಿಕ್ಕುಗಳಿಗೆ ಎಳೆದಂತಹ ರೇಖೆಗಳು. ಕೆಲಸದ ರಾಶಿಯೇ ತನ್ನ ಮುಂದಿದ್ದರೂ ಮನಸ್ಸು ಊರಲ್ಲಿತ್ತು. ತೀರ್ಥಹಳ್ಳಿ, ಕೊಪ್ಪ, ಶೃಂಗೇರಿಯ ರಸ್ತೆಗಳ ಸಂಗಮ ಕಮ್ಮರಡಿ. ಊರಿನ ಈ ತುದಿಯಿಂದ ಆ ತುದಿಗೆ ಆರಾಮಾಗಿ ನಡೆಯಬಹುದಾದಷ್ಟು 
Go to your blog listವಿಸ್ತೀರ್ಣ. ಮೂರೂ ರಸ್ತೆಗಳ ಸರ್ಕಲ್ ನಲ್ಲಿ ಒಂದಿಷ್ಟು ಅಂಗಡಿಗಳು, ಅಡಿಗರ ಹೋಟೆಲ್, ರಾಯರ ರೈಸ್ ಮಿಲ್, ಹೊಸದಾಗಿ ಕಟ್ಟಿರುವ ಒಂದು ಕಾಂಪ್ಲೆಕ್ಸ್, ಸಂಜೆ ಹೊತ್ತಾದರೆ ಶಿವಣ್ಣನ ಗೋಬಿ ಗಾಡಿ, ಅಂಗಡಿಗಳನ್ನ ದಾಟಿದರೆ ಅಪ್ಪಟ ಮಲೆನಾಡಿನ ಹಂಚಿನ ಮನೆಗಳು, ತೀರ್ಥಹಳ್ಳಿ ರಸ್ತೆಯಲ್ಲೊಂದು ರಾಘವೇಂದ್ರ ಸ್ವಾಮಿ ಮಠ, ಶೃಂಗೇರಿ ರಸ್ತೆಯಲ್ಲೊಂದು ಗಣಪತಿ ದೇವಸ್ಥಾನ ಹೀಗೆ ಕಮ್ಮರಡಿ ಮ್ಯಾಪಿನಲ್ಲಿ ಜೀವಂತವಾದಂತೆ ಅವನಿಗೆ ಭಾಸವಾಗಿತ್ತು. ಮ್ಯಾನೇಜರ್ ನಿಂದ ಇನ್ನೊಂದು ಮೇಲ್ ಬಂದಾಗಲೇ ಮ್ಯಾಪ್ ಕ್ಲೋಸ್ ಆಗಿದ್ದು. ಮ್ಯಾಪ್ ಕ್ಲೋಸ್ ಆದರೂ ಕಣ್ಣ ಮುಂದೆ ಹರಿದಾಡುತ್ತಿರುವ ನೆನಪಿನ ದೃಶ್ಯಾವಳಿಗಳು ಮಾತ್ರ ನಿಲ್ಲಲಿಲ್ಲ. 


ಬೆಂಗಳೂರಿನ ಮಹಾ ನಗರದಲ್ಲಿ ಹುಟ್ಟಿ, ಅಲ್ಲೇ ಓದಿ, ಅಲ್ಲೇ ಕೆಲಸ ಮಾಡುತ್ತಿರವ ವಿಶ್ವನಿಗೆ ತನ್ನ ಊರೆಂದರೆ ಸ್ವರ್ಗ. ದಿನವೆಲ್ಲಾ ಕೆಲಸ, ವೀಕೆಂಡ್ ಬಂದರೆ  ಬೆಂಗಳೂರಿನ ಶಾಪಿಂಗ್ ಮಾಲುಗಳು, ಪ್ರತಿ ಶನಿವಾರ ಬೆಳಿಗ್ಗೆ ದಿ ಕ್ಲಬ್ ನಲ್ಲಿ ಆಡುವ ಸ್ಕ್ವಾಷ್ ಆಟ, ಭಾನುವಾರದ ದರ್ಶಿನಿ ತಿಂಡಿ, ತಿಂಗಳಿಗೊಮ್ಮೆ ಗೆಳೆಯರ ಜೊತೆ  ಬ್ರಿವರಿಯಲ್ಲಿ ಕುಂತು ತಣ್ಣನೆ ಬಿಯರ್ ಕುಡಿದು ಹರಟಿದ್ದು ಇವೆಲ್ಲವೂ ಬೋರಾದಾಗ ಊರು ಅವನ ಪಾಲಿಗೆ ಏಕತಾನತೆಯಿಂದ ಹೊರಬರುವುದಕ್ಕೆ ಕಂಡುಕೊಂಡಿರುವ ಮಾರ್ಗ. ನೆಮ್ಮದಿಯನ್ನರಸಿ ಹೊರಡೋ ತಾಣ. 

ಊರಿಗೆ ಹೋದರೆ ಹೆಗಡೆಯವರ ಮೊಮ್ಮಗನಾ ಅಂತ ಕೇಳಿ ಎಲ್ಲರೂ ಮಾತಾಡಿಸುತ್ತಿದ್ದರು. ಕ್ಯಾಂಟೀನ್ ನ ಅಡಿಗರು, ಇವನು ಬಂದ ತಕ್ಷಣ 'ಏನೋ ಅಳಿಯಾ.... ಏನಂತಿದೆ ಬೆಂಗಳೂರು' ಅಂತ ಕೇಳಿ ಕುಶಲೋಪರಿ ನಡೆಸುತ್ತಿದ್ದರು. ಅವರಿಗೆ ಅವನನ್ನ ಚಿಕ್ಕವನಿದ್ದಾಗಿಂದಲೂ ಅಳಿಯಾ ಅಂತ ಕರೆದೇ ಅಭ್ಯಾಸ. ಅಡಿಗರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆಯಾಗಿದ್ದರೂ ಇವನನ್ನ ಹಾಗೆ ಕರೆಯುವುದನ್ನ ಬಿಟ್ಟಿರಲಿಲ್ಲ. ಅಲ್ಲೊಂದಿಷ್ಟು ಹರಟಿ, ಖಾರ ಚಟ್ನಿಯ ಜೊತೆ ಎರಡು ಬನ್ಸ್ ತಿಂದು, ನಿಮ್ಮ ಬನ್ಸ್ ರುಚಿ ಬೆಂಗಳೂರಿನ ಯಾವ ಹೋಟೆಲ್ಲಲ್ಲೂ ಇಲ್ಲ ಅಡಿಗರೇ ಅಂತ ಅವರನ್ನಷ್ಟು ಖುಷಿಯಾಗಿಸಿ ಅಲ್ಲಿಂದ ಹೊರಡುತ್ತಿದ್ದ. ಅಲ್ಲಿಂದ ತೀರ್ಥಹಳ್ಳಿಯ ದಾರಿಯಲ್ಲಿ ಒಂದರ್ಧ ಕಿಲೋಮೀಟರು ನಡೆದರೆ ರಾಘವೇಂದ್ರ ಸ್ವಾಮಿ ಮಠ. ಮಠಕ್ಕೆ ಭೇಟಿ ಕೊಟ್ಟು ಅಲ್ಲೇ ಬಲಬದಿಗೆ ತಿರುಗಿದರೆ ಮಣ್ಣಿನ ರಸ್ತೆ. ಅಲ್ಲೇ ಅಜ್ಜನ ಮನೆ. ಬಸ್ ಸ್ಟ್ಯಾಂಡ್ ನಿಂದ ಮನೆಯ ತನಕವೂ ಅಜ್ಜನನ್ನ ಮಾತಾಡಿಸುವ ಜನ. ತಾನು ಸಾಫ್ಟ್ ವೇರ್ ಕಂಪನಿಯಲ್ಲಿ ಹೆಸರಿಗೆ Technical Lead ಆಗಿ ಲಕ್ಷ ಸಂಪಾದಿಸಿದರೂ ತನ್ನ ಪರಿಚಯ ತನ್ನ ಆಫೀಸಿನ ಒಂದಿಪ್ಪತ್ತು ಜನಕ್ಕೆ ಮಾತ್ರ. ಪಕ್ಕದ ರಸ್ತೆಯಲ್ಲಿ ತನ್ನ ಗುರುತಿಸುವುದಿರಲಿ, ಪಕ್ಕದ ಮನೆಯವರಿಗೇ ತನ್ನ ಪರಿಚಯವಿಲ್ಲ. ಅಜ್ಜನಿಗೆ ಸಿಗುತ್ತಿದ್ದ ಮರ್ಯಾದೆ, ವಿಚಾರಿಸುವ ಜನ ಇವೆಲ್ಲವನ್ನ ನೋಡಿದರೆ ಊರಿನಲ್ಲೇ ಇದ್ದು ಬಿಡುವ ಯೋಚನೆ ವಿಶ್ವನಿಗೆ. ಬೆಂಗಳೂರಿಗೆ ಬಂದು ಮನೆ ಮಾಡಿರುವ ಅಪ್ಪನಿಗೆ ಒಂದಿಷ್ಟು ಬೈದುಕೊಳ್ಳುತ್ತಿದ್ದ. 


ಊರಿನಲ್ಲಿ ಎರಡಂತಸ್ತಿನ ವಿಶಾಲವಾದ ಮನೆ, ಮನೆಯ ನಾಲ್ಕೂ ಸುತ್ತಲಿನ ನಡುವೆ ಅಡಿಕೆ ಹರವಲು ವಿಶಾಲ ನಡುಮನೆ,  ಅಚಾನಕ್ಕಾಗಿ ಸುರಿವ ಮಳೆಯಿಂದ ಒಣಗಿಸಿದ ಅಡಿಕೆ ಒದ್ದೆಯಾಗಿ ಬರುವ ಮುಗ್ಗಲು ವಾಸನೆ, ಕಿಟಕಿಗಳಿಲ್ಲದ ದೇವರ ಮನೆಯೊಳಗಿನ ಕತ್ತಲು, ಹಂಡೆಯಲ್ಲಿ ಬಿಸಿ ಬಿಸಿ ಕುದಿಯುವ ನೀರು, ಮನೆಯ ಮುಂದೆ ಅಂಗಳದಲ್ಲಿ ತೆಂಗಿನ ಗರಿಯ ಚಪ್ಪರ, ಅಂಗಳದ ಮುಂದಿನ ಅಡಿಕೆ ತೋಟ, ಅಡಿಕೆ ತೋಟದಲ್ಲಿ ಹಾದುಹೋಗುವ ನೀರಿನ ಸಣ್ಣ ನಾಲೆ, ನಾಲೆಗೊಂದು ಸಂಕ, ಸಂಕ ದಾಟಿ ಅತ್ತ ಹೋದರೆ ವೆನಿಲಾ ಪರಿಮಳ, ವೆನಿಲಾ ಗಿಡಗಳ ರಾಶಿ, ಮದ್ಯೆ ಒಂದಿಷ್ಟು ಬಾಳೆಮರ, ಅಲ್ಲಲ್ಲಿ ಬಾಳೆ ಗೊಂಚಲು, ಅಡಿಕೆ ಮರಕ್ಕೆ ಹಬ್ಬಿಸಿದ ವೀಳ್ಯದೆಲೆ ಬಳ್ಳಿ, ಬೇಸಿಗೆಯಲ್ಲಿ ಸ್ಪ್ರಿಂಕ್ಲರ್ ಜೆಟ್ ನಿಂದ ತೋಟಕ್ಕೆಲ್ಲಾ ಮಳೆಯ ಸಿಂಚನ, ಮಧ್ಯೆ ಎಲ್ಲೋ ಒಂದು ಪೇರಲೆ ಗಿಡದಲ್ಲಿ ಈಗ ತಾನೇ ಚಿಗುರಿದ ಪೇರಲೆ ಕಾಯಿ, ಮಳೆಗಾಲದಲ್ಲಿ ಒಂದೇ ಸಮನೆ ಧೋ ಅಂತ ಸುರಿಯೋ ಮಳೆ, ಕರೆಂಟು ಹೋದಾಗಿನ ಸೀಮೆ ಎಣ್ಣೆ ಬಿರಡೆಯ ಕುರುಡು ಬೆಳಕು, ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಆವರಿಸುವ ಗಾಡಾಂಧಕಾರ, ರಾತ್ರಿ ಮಲಗಿದ ಮೇಲೆ ಎಷ್ಟೋ ಹೊತ್ತು ಕೇಳಿಸುವ ಗುಯ್ಗುಡುವ ಜೀರುಂಡೆ ಸದ್ದು.. ಹೀಗೆ ಬೆಂಗಳೂರಿನ ಏಕತಾನತೆಯಿಂದ ಬೋರಾದ ಮನಸ್ಸನ್ನ ರಿಚಾರ್ಜ್ ಮಾಡಲು ವಿಶ್ವನಿಗೆ ಇಷ್ಟು ಸಾಕಾಗಿತ್ತು. 


ಮನೆಯ ಅಂಗಳದಲ್ಲಿರುವ ಕಪ್ಪೆ ಗುಂಡಿ ಅವನಿಗೆ ಮುಗಿಯದ ಕುತೂಹಲ. ಯಾವ ಕಾಲದಿಂದ ಇದೆಯೋ ಏನೋ, ಅಂಗಳದ ಜಗಲಿ ಕಟ್ಟೆಯ ತುದಿಯಲ್ಲಿ ಅದಕ್ಕೊಂದು ಗೂಡು. ಕಪ್ಪೆಗಳಿಗೆ ಅದು ತಮಗೆಂದೇ ಮಾಡಿಟ್ಟ ಗುಂಡಿಯೆಂದು ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಮಳೆಗಾಲದಲ್ಲಿ ಎಷ್ಟೊತ್ತಿಗೆ ನೋಡಿದರೂ ಕನಿಷ್ಠ ೩೦ ೪೦ ಕಪ್ಪೆಗಳು ಅಲ್ಲಿರುತ್ತಿತ್ತು. ಕಪ್ಪೆಗಳನ್ನ ಹುಡುಕಿಕೊಂಡು ಅವಾಗವಾಗ ಕೇರೆ ಹಾವು ಬಂದಾಗ ಒಂದೋ ಎರಡೋ ಕಪ್ಪೆಗಳ ಸಂಖ್ಯೆ ಕಡಿಮೆಯಾಗುತ್ತಿತ್ತು. ಅದು ವಿಶ್ವನ S L R ಕ್ಯಾಮೆರಾದಲ್ಲಿ ಸೆರೆಯಾಗುತ್ತಿತ್ತು. ತಕ್ಷಣವೇ ಫೇಸ್ಬುಕ್ ನ ಗೋಡೆಯ ಮೇಲೆ ಅಪ್ ಲೋಡ್ ಆಗುತ್ತಿತ್ತು.  


ಗಟ್ಟಿಮುಟ್ಟಾಗಿದ್ದಂತೆ ಕಾಣುತ್ತಿದ್ದ ಅಜ್ಜ ಅಚಾನಕ್ಕಾಗಿ ತೀರಿಕೊಂಡು ವರ್ಷವಾಗಿತ್ತು. ಅಜ್ಜಿಗೆ ಮೊದಲಿನ ಹುಮ್ಮಸ್ಸಿಲ್ಲ. ಊರಲ್ಲಿ ಕೆಲಸದ ಆಳು ಮಕ್ಕಳಿಗೂ ಕೊರತೆ. ವಿಶ್ವನ ಅಪ್ಪ ಶಂಕರ ಹೆಗಡೆ ಒಂದು ನಿರ್ಧಾರಕ್ಕೆ ಬಂದಾಗಿತ್ತು. ಮನೆ, ತೋಟ ಮಾರಿಬಿಡೋಣ, ಅಮ್ಮ ಬಂದು ನಮ್ಮ ಜೊತೆ ಬೆಂಗಳೂರಿನಲ್ಲಿ ಇರಲಿ ಅನ್ನೋದು ಅವರ ಅಭಿಪ್ರಾಯ. ಅಜ್ಜಿ ಆ ನಿರ್ಧಾರಕ್ಕೆ ಒಪ್ಪಿ ಅಂಕಿತ ಹಾಕಾಗಿತ್ತು. 


ವಿಶ್ವನಿಗೆ ತಕ್ಷಣಕ್ಕಾಗಿದ್ದು ಒಂದೇ ಚಿಂತೆ, ಇನ್ನು ಮುಂದೆ ತನ್ನ ಪಾಲಿಗೆ ಊರು ಇರುವುದಿಲ್ಲ. ಊರಲ್ಲೆ ಜೀವನ ಕಳೆಯೋದು ಸದ್ಯಕ್ಕೆ ಆಗದ ಕೆಲಸ. ಆದರೆ ಮನೆ ಮಾರಿದರೆ ಮತ್ತೆ  ಊರಿಗೆ ಹೋಗಲು ಕಾರಣಗಳಿಲ್ಲ. ಹೋದರೂ ಉಳಿದುಕೊಳ್ಳಲು ಸ್ವಂತದ್ದೊಂದು ಜಾಗವಿಲ್ಲ. ಪ್ರತಿ ಬಾರಿ ಊರಿಗೆ ಹೋದಾಗ ಸಿಗುತ್ತಿದ್ದ ಹೊಸ ಅನುಭವಗಳು ಇನ್ನು ಮುಂದೆ ನೆನಪುಗಳು ಮಾತ್ರ. ಅಲ್ಲಿನ ಜನ ಜಾಗಗಳಿನ್ನು ಕೇವಲ ತನ್ನ ಡೈರಿ ಪುಟಗಳಲ್ಲಿ. ಮನೆ, ತೋಟ ಮಾರಿಬಿಡುವ ನಿರ್ಧಾರ ಒಪ್ಪಲಾಗಲಿಲ್ಲ, ಹಾಗೆಯೇ ನೋಡಿಕೊಳ್ಳಲು ಕೂಡ ಸಾಧ್ಯವಿಲ್ಲ. ತೀರ್ಮಾನವನ್ನು ವಿರೊಧಿಸಲೂ ಆಗದೆ, ಸಮರ್ಥಿಸಲೂ ಆಗದೆ ಸುಮ್ಮನಿದ್ದುಬಿಟ್ಟ. ಆದರೆ ಊರಿನ ಜೊತೆ ಸಖ್ಯವನ್ನ ಮುಂದುವರಿಸಲು ಕಾರಣ ಹುಡುಕಲು ಶುರು ಮಾಡಿದ. ವರ್ಷಕ್ಕೊಮ್ಮೆ ಊರಿನಲ್ಲಿ ಅದ್ದೂರಿಯಾಗಿ ನಡೆಯುವ ಆರಾಧನಾ ಮಹೋತ್ಸವ ನೆನಪಾಗಿ ಅಲ್ಲಿನ ರಾಘವೇಂದ್ರ ಸ್ವಾಮಿ ಮಠಕ್ಕೆ ಹತ್ತು ಸಾವಿರ ದೇಣಿಗೆ ನೀಡಿದ, ಮುಂದಿನ ಆರಾಧನಾ ಮಹೋತ್ಸವಕ್ಕೆ ತನ್ನನ್ನೂ ಕರೆಯಲೆಂದು, ಅಲ್ಲಿಗೆ ಹೋಗಲೊಂದು ನೆಪವಿರಲೆಂದು. 


ಕಮ್ಮರಡಿ ಕಾಡುತ್ತಿತ್ತು. ಅಲ್ಲಿನ ನೆನಪುಗಳ ರಾಶಿಯ ಮುಂದೆ ಕೆಲಸದ ರಾಶಿ ಸರದಿಯಲ್ಲಿ ನಿಂತಿತ್ತು. ಮತ್ತೆ ಊರಿಗೆ ಹೋಗಲು ಆರಾಧನಾ ಮಹೋತ್ಸವದ ತನಕ ಕಾಯಲಾರೆ ಅನ್ನಿಸಿರಬೇಕು, ಸರದಿಯಲ್ಲಿ ನಿಂತವರನ್ನ ಲೆಕ್ಕಿಸದೆ ಗಂಟೆ ಒಂದಾಗುತ್ತಿದ್ದಂತೆ ಮಧ್ಯಾಹ್ನ ಊಟಕ್ಕೆ ಹೊರಟು ಲಂಚ್ ಬ್ರೇಕ್ ನ ಬೋರ್ಡನ್ನ ಕೌಂಟರ್ನಲ್ಲಿರಿಸಿ ಹೊರಡುವ ಸರ್ಕಾರಿ ಕೆಲಸದವರಂತೆ, ಬೆಳಿಗ್ಗೆ ಬೆಳಿಗ್ಗೆಯೇ ಕೆಲಸಗಳ ರಾಶಿಯನ್ನ ಬದಿಗೆ ಸರಿಸಿ, ಪರ್ಸನಲ್ ಎಮರ್ಜೆನ್ಸಿ, ತಕ್ಷಣ ಹೊರಡುತ್ತಿದ್ದೇನೆಂದು ಮ್ಯಾನೇಜರ್ ಗೆ ತಿಳಿಸಿ ಮನೆಯ ಕಡೆ ಹೊರಟ. 


ತೋಟ ಮಾರಿ ಬಂದ ದುಡ್ಡಿನಲ್ಲಿ Investment purpose ಗೆ ಇರಲಿ ಅಂತ ಮನೆಯ ನೆಂಟರೆಲ್ಲಾ ಒತ್ತಾಯ ಮಾಡಿ ಕೊಡಿಸಿದ ಎರಡು ರೂಮಿನ ಸಾವಿರ ಚದರಡಿಯ ಮನೆ. ಹತ್ತಂತಸ್ತಿನ ಮೂರು ಕಟ್ಟಡಗಳ ಪೈಕಿ ಒಂದರಲ್ಲಿ ನಾಲ್ಕನೇ ಅಂತಸ್ತಿನಲ್ಲಿ ಮನೆ. Apt 4E. ಲಿಫ್ಟ್ ನಲ್ಲಿ ದಿನಾ ಅದೇ ಮುಖಗಳನ್ನ ನೋಡಿದರೂ ಎಲ್ಲರೂ ಅಪರಿಚಿತರೇ. ಮನೆಯ ಒಳಗೊಂದು ಚಿಕ್ಕ ಬಾಲ್ಕನಿ. ಬಾಲ್ಕನಿಯಿಂದ ಆಚೆ ನೋಡಿದರೆ ಅದೇ ಅಪಾರ್ಟ್ಮೆಂಟಿನ ಮತ್ತೊಂದಿಷ್ಟು ಮನೆಗಳ ರಾಶಿ, ಬಾಲ್ಕನಿಯ ತುಂಬಾ ಒಣಗಿಸಲು ಹಾಕಿದ ಬಟ್ಟೆಯ ರಾಶಿ. ಎರಡು ದಿನದ ಮಟ್ಟಿಗೆ ತನ್ನ ಬಟ್ಟೆ ಪ್ಯಾಕ್ ಮಾಡಿ ಅಲ್ಲಿಂದ ಹೊರಟ. ಕಾರು ಕಮ್ಮರಡಿಯ ಕಡೆ ಮುಖ ಮಾಡಿತ್ತು. 


ಕಮ್ಮರಡಿಗೆ ಬಂದು ತಲುಪಿದಾಗ ಸಂಜೆ. ಸುಮಾರು ತಿಂಗಳುಗಳ ನಂತರ ಊರಿಗೆ ಬಂದ ಖುಷಿ. ಅಡಿಗರ ಕ್ಯಾಂಟೀನ್ ನ ಮುಂದೆ ಕಾರು ನಿಲ್ಲಿಸಿದ. ಹೋಟೆಲ್ಲಿನಲ್ಲಿ ಅಡಿಗರಿರಲಿಲ್ಲ. ಎರಡು ವರ್ಷದಿಂದ ಅಮೇರಿಕಾದಲ್ಲಿರುವ ಮಗಳ ಮನೆಗೆ ಮೂರು ತಿಂಗಳ ಮಟ್ಟಿಗೆ ಹೋಗಿದ್ದಾರಂತೆ. ಅಳಿಯನನ್ನ ಕೇಳುವವರಿರಲಿಲ್ಲ. ಎಂದಿನಂತೆ ಎರಡು ಬನ್ಸ್ ಆರ್ಡರ್ ಮಾಡಿದ. ಅಡಿಗರ ನಗು ಮುಖ ಅಲ್ಲಿರದೇ ಯಾವತ್ತಿನ ರುಚಿ ಎನಿಸಲಿಲ್ಲ. ರಾಘವೇಂದ್ರ ಸ್ವಾಮೀ ಮಠಕ್ಕೆ ಹೋಗಿ ಹತ್ತು ನಿಮಿಷ ಕುಳಿತ. ಮನಸ್ಸಿಗೆ ತಂಪೆನಿಸಿತು. ಅಜ್ಜನ ಜೊತೆಗೆ ಬಂದಾಗ ಚೆನ್ನಾಗಿ ಮಾತಾಡಿಸುತ್ತಿದ್ದ ಅರ್ಚಕರಿಗೆ ಅವನ ಪರಿಚಯ ಸಿಗಲಿಲ್ಲವೇನೋ, ಅವರಾಗೇ ಮಾತಾಡಿಸಲಿಲ್ಲ. ತಾನಾಗೇ ಮಾತಾಡಿಸಲು ಹೊದ. ಹೆಗಡೆಯವರ ಮೊಮ್ಮಗ ಅಂತ ಹೇಳಿದ ಮೇಲೆ ಒಂದೆರಡು ಮಾತಾಡಿದರಷ್ಟೇ. ಬಸು ಟೈಲರ್ ಅಂಗಡಿಯಲ್ಲೂ ಅದೇ ಕಥೆ, ಮನೆ ನೋಡಿ ಬರೋಣವೆಂದು ಮನೆಯ ಕಡೆ ಹೊರಟ. ಮನೆಯ ಅಂಗಳದ ಕಪ್ಪೆ ಗುಂಡಿ ಮುಚ್ಚಲಾಗಿತ್ತು. ಮನೆ ಕೊಂಡುಕೊಂಡಿದ್ದ ಗೌಡರಿಗೆ ಪರಿಚಯ ಹೇಳಿದ. ಒಂದು ಲೋಟ ಕಾಫಿ ಕುಡಿದು ಮನೆಯ ಬಗ್ಗೆ ಹರಟಿದರು. ತೋಟ ನೋಡಿ ಬರುತ್ತೇನೆಂದ. ಕತ್ತಲಾದ್ದರಿಂದ ಗೌಡರು ಟಾರ್ಚ್ ಕೊಟ್ಟರು. ಟಾರ್ಚ್ ನ ಬೆಳಕಿನಲ್ಲಿ ಸಂಕ ದಾಟಿ ಇಡೀ ತೋಟವನ್ನೊಂದು ಸುತ್ತು ಹೊಡೆದು, ಕೊನೆಯ ಬಾರಿಗೆಂಬಂತೆ ಕಣ್ ತುಂಬಿಸಿಕೊಂಡ. ಮನಸ್ಸು ಈ ಜಾಗವನ್ನ ಬಿಟ್ಟು ಹೋಗಲು ಬಿಡುತ್ತಿರಲಿಲ್ಲ. 


ರಾತ್ರಿ ಒಂಬತ್ತಾಗಿತ್ತು. ಅವನಿಗೆ ಯಾಕೋ ಈ ಊರಿಗೆ ಹೊಸಬನಂತೆ ಕಾಣುತ್ತಿದ್ದೇನೆ ಎಂದೆನಿಸಿತು. ಅಜ್ಜ ಹೋಗಿ ಒಂದೇ ವರ್ಷಕ್ಕೆ ಅಪರಿಚಿತನಾಗಿಬಿಟ್ಟೆ ಎಂದೆನಿಸಿತು. ಉಳಿಯುವುದೆಲ್ಲಿ ಎಂದು ಗೊತ್ತಾಗಲಿಲ್ಲ. ತನಗೂ ಊರಿಗೂ ಮಧ್ಯೆ ಇದ್ದ ಕೊಂಡಿ ಕಳಚಿ ಹೋಗಿದ್ದರ ಅರಿವಾಗಿತ್ತು. 


ಮತ್ತೆ ಬೆಂಗಳೂರಿಗೆ ಹೋದರಾಯ್ತು ಅಂತ ಹೊರಟ. ಕಮ್ಮರಡಿಯಿಂದ ಹೊರಟು ಒಂದಿಪ್ಪತ್ತು ಕಿಲೋಮೀಟರ್ ಬರುತ್ತಿದ್ದಂತೆ, ಎಡಗಡೆ ರಸ್ತೆಯಲ್ಲಿ ಒಂದು ಬೋರ್ಡ್ ಕಂಡಿತು. "ಹೊನ್ನೇರಮನೆ ಹೋಂ ಸ್ಟೇ... ನಿಮ್ಮ ಮನೆ ಎಂದೆನಿಸುವ ವಿಶೇಷ ಅನುಭವ.. ತೋಟ, ಗುಡ್ಡದ ಮನೆ, ಮನೆ ಊಟ.." ತಕ್ಷಣ ಅಲ್ಲಿದ್ದ ಫೋನ್ ನಂಬರಿಗೆ ಕಾಲ್ ಮಾಡಿದ. ಅಡ್ರೆಸ್ ಕೇಳಿಕೊಂಡ. ಅಲ್ಲಿಗೆ ಕಾರು ತಿರುಗಿಸಿದ. ಊರಲ್ಲಿದ್ದ ಮನೆಯನ್ನ ಮಾರಿ ಬೆಂಗಳೂರಲ್ಲಿ ಒಂದು ಫ್ಲಾಟ್ ಖರೀದಿಸಿ, ಊರಿನ ಅನುಭವಕ್ಕೆಂದು ಕೃತಕ ಊರಿನ ಮನೆಗೆ ಬಂದ ತನ್ನ ಬಗ್ಗೆ ಅವನಿಗೆ ನಗು ಬಂತು. ಪಕ್ಕದ ರೂಮಿಗೆ ಬಂದ ಜನ ಮತ್ತೆ ಅಪರಿಚಿತರು. ನೋಡಿ ಮುಗುಳ್ನಕ್ಕ, ಆ ಕಡೆಯಿಂದ ನಗು ವಾಪಸ್ ಬರಲಿಲ್ಲ.  ಊರಿನ ಅನುಭವವೆಂದರೆ ಬರಿ ಹಂಚಿನ ಮನೆ, ಮನೆ ಊಟ ಅಲ್ಲ ಅಂತ ಕೂಗಿ ಹೇಳಬೇಕೆಂದೆನಿಸಿತು. ಊರು, ಊರಿನ ಮನೆ ಕಳೆದುಕೊಂಡಿದ್ದಕ್ಕೆ ಮರುಗಿದ. ಹೋಂ ಸ್ಟೇ ಯ ರೂಂ ಒಂದರಲ್ಲಿ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ. 


ಅವನಿಗೆ ವಿಚಿತ್ರ ಕನಸು ಕಂಡಿತ್ತು. ಕನಸಿನಲ್ಲಿ, ತನ್ನ ಅಪಾರ್ಟ್ಮೆಂಟ್ ಯಾರೋ ನಿರ್ಮಿಸಿದ ಕಪ್ಪೆಯ ಗುಂಡಿಯಂತೆ ಕಂಡಿತ್ತು. ಅಪಾರ್ಟ್ಮೆಂಟ್ ತುಂಬಾ ಕಪ್ಪೆಗಳ ರಾಶಿ, ಎಲ್ಲವೂ ವಟರುಗುಡುತ್ತಿದ್ದವು. ಎತ್ತರೆತ್ತರಕ್ಕೆ ಜಿಗಿಯುತ್ತಿದ್ದವು. ಹಾವಿಂದ ತಪ್ಪಿಸಿಕೊಂಡು ಓಡುತ್ತಿದ್ದವು. ಕನಸು ಬೇಗ ಎಬ್ಬಿಸಿತು. ಎದ್ದವನೇ ಕಾರ್ ಹತ್ತಿದ. ಊರು ಇಷ್ಟವಾದರೂ ಇರಲಾಗುವುದಿಲ್ಲ, ಬೆಂಗಳೂರು ಕೈ ಬೀಸಿ ಕರೆದರೂ ಇಷ್ಟವಾಗುವುದಿಲ್ಲ. ಕೊನೆಗೂ ಅನಿವಾರ್ಯತೆ ಎಂಬಂತೆ ಬೆಂಗಳೂರಿನ ರಸ್ತೆಯಲ್ಲಿ ಸಾಗತೊಡಗಿದ. 


-- 
ಅಕ್ಷಯ ಪಂಡಿತ್, ಸಾಗರ 
೮ - ೨ - ೨೦೧೪ 



ಎರಡು ದಿನದ ನೆಮ್ಮದಿ ಅರಸಿ...


[ ಓ ಮನಸೇ ಸಂಚಿಕೆ ೮೭ - ೧೫ ಮಾರ್ಚ್ ೨೦೧೪ರಲ್ಲ್ಲಿ ಪ್ರಕಟವಾದ ಲಘು ಬರಹ]

http://www.readwhere.com/read/c/2556433
http://www.readwhere.com/read/c/2556374

                  ಬೆಂಗಳೂರಿನ  ಶುಕ್ರವಾರದ ರಾತ್ರಿಗಳು ನನಗಿಷ್ಟ.  ಅವಸರದಲ್ಲಿ ಊರಿಗೆ ಹೊರಟವರಿಂದ ನೂರೋ ಇನ್ನೂರೋ  ಸುಲಿವ ಖುಷಿಯಲ್ಲಿ  ಆಟೋಗಳೆಲ್ಲಾ ಮೆಜೆಸ್ಟಿಕ್ ನ ಕಡೆ ಮುಖ ಮಾಡಿರುತ್ತವೆ. ಬಸ್ ನ ಸೀಟುಗಳ ತುಂಬಾ ಬ್ಯಾಗುಗಳ ರಾಶಿ. ಆಟೋವನ್ನೋ, ಬಸ್ಸನ್ನೋ ಹತ್ತಿ ಮೆಜೆಸ್ಟಿಕ್ ನ ಕಡೆ ಹೊರಟವರಿಗೆ ಸಮಯಕ್ಕೆ ಸರಿಯಾಗಿ ಹೋಗಿ ತಲುಪುತ್ತೇವೋ ಇಲ್ಲವೋ ಅನ್ನೋ ಧಾವಂತ. ಬಸ್ಸು ಹೊರಟುಬಿಟ್ಟರೆ ಅನ್ನೋ ಚಿಂತೆ. ಬಸ್ ಸ್ಟ್ಯಾಂಡ್ , ಆನಂದರಾವ್ ಸರ್ಕಲ್, ಕಪಾಲಿ ಎಲ್ಲಿ ಹೋದರೂ ಧರ್ಮಸ್ಥಳ, ಶಿವಮೊಗ್ಗ, ಗೋಕರ್ಣ, ಹುಬ್ಬಳಿ, ಮಂಗಳೂರು ಎಲ್ಲಿ ಸಾರ್, ಹೇಳಿ ಸಾರ್ ಅಂತ ಕೇಳಿಕೊಂಡು ಹಿಂದೆ ಬರೋ ಜನ. ಎಲ್ಲರಿಂದಲೂ ತಪ್ಪಿಸಿಕೊಂಡು ರಾಜಹಂಸವೋ, ಐರಾವತವೋ ಮತ್ಯಾವುದೋ ಪ್ರೈವೇಟ್ ಬಸ್ ನ ಹತ್ತಿ  ಕುಳಿತರೆ ವಾರ ಪೂರ್ತಿ ಮಾಡಿದ ಜೀತದಿಂದ ಬಿಡುವು. ದಿನ ನಿತ್ಯದ ಟ್ರಾಫಿಕ್ ಜಂಜಾಟ, ಕರ್ಕಶ ಹಾರನ್ಗಳ ಶಬ್ದದಿಂದ ಬಿಡುವು. ಐದು ದಿನದ ಕೆಲಸದಲ್ಲೇ ಹಿಂಡಿ ಹಿಪ್ಪೆ ಮಾಡಿ ಹೈರಾಣು ಮಾಡಿಸಿದ ಬೆಂಗಳೂರಿನಿಂದ ಬಿಡುವು. ಕಣ್ಣಾಡಿಸಿದಲ್ಲೆಲ್ಲಾ  ಜನರಿದ್ದರೂ ಆವರಿಸಿಕೊಳ್ಳುವ ಒಂಟಿತನದಿಂದ ಬಿಡುವು.

                    ಬೆಂಗಳೂರಿನಲ್ಲೇ ಹುಟ್ಟಿ, ಇಲ್ಲೇ ಓದಿ, ಇಲ್ಲೇ ಅಥವಾ ಇನ್ನೆಲ್ಲೋ ಇಂತಹದೇ ಮತ್ತೊಂದು ನಗರದಲ್ಲಿ ಕೆಲಸ ಮಾಡಿ ತಮ್ಮ ಜೀವನವೆಲ್ಲಾ ನಗರಗಳಲ್ಲೇ ಕಳೆಯುವವರನ್ನ ನೋಡಿದರೆ ನಿಜಕ್ಕೂ ಅನುಕಂಪ ಹುಟ್ಟುತ್ತದೆ. ಸುಮಾರು ಪ್ರತಿ ವಾರ ಊರಿಗೆ ಹೋಗ್ತೀಯಲ್ಲಾ, ಅಲ್ಲೇನು ಅಂತದ್ದು ಇಟ್ಟಿದೀಯ ಅಂತ ಸುಮಾರು ಜನ ಕೇಳಿರ್ತಾರೆ. ವಿವರಿಸಬಲ್ಲೆವಾ! ಗೊತ್ತಿಲ್ಲ....  ಸುಮ್ಮನೆ ನಕ್ಕಿರುತ್ತೇವೆ.

ಮಳೆಗಾಲದಲ್ಲಿ ಒಂದೇ ಸಮನೆ ದಿನಗಟ್ಟಲೆ ಸುರಿಯುವ ಜಡಿ ಮಳೆಯ ಸದ್ದು, ಸಂಜೆಯ ಹೊತ್ತಿಗೆ ಊರ ಕೆರೆಯ ಮೇಲೆ ಹಾದು ಹೋಗುವಾಗಿನ ತಣ್ಣನೆಯ ಗಾಳಿ, ಕೇಶವನ ಅಂಗಡಿಯ ಮಸಾಲೆ ಮಂಡಕ್ಕಿಯ ಜೊತೆ ಕಂಚಿಕಾಯಿ ಸೋಡಾದ  ರುಚಿ, ಮುಂಚೆ ತುಂಬಾ ಸ್ಟ್ರಿಕ್ಟ್ ಆಗಿದ್ದ ಹೈಸ್ಕೂಲ್ ನ ಹೆಡ್ಮಾಸ್ಟರ್ ರಸ್ತೆಯಲ್ಲೆಲ್ಲೊ ಅಚಾನಕ್ಕಾಗಿ ಸಿಕ್ಕು ಸಲುಗೆಯಿಂದ ಪ್ರೀತಿಯಿಂದ ಮಾತಾಡಿಸುವ ರೀತಿ, ಊರಲ್ಲಿರುವ ಟಾಕೀಸ್ ನಲ್ಲಿ ಯಾವುದೊ ಒಂದು ಸಿನೆಮಾ ನೋಡಿ, ಗೆಳೆಯರೊಡನೆ ಕೂತು ಸಿನೆಮಾಕ್ಕೊಂದಷ್ಟು ಬೈದರೆ ಸಿಗುವ ಸಮಾಧಾನ... ಇದನ್ನೆಲ್ಲಾ ವಿವರಿಸಬಲ್ಲೆವಾ! ಗೊತ್ತಿಲ್ಲ.

                  ಊರಿಗೆ ಹೊರಟ ಬಸ್ಸಿನಲ್ಲಿ ಒಂದಾದರೂ ಪರಿಚಯದ ಮುಖ ಇದ್ದೇ ಇರುತ್ತೆ. ಪ್ರೈಮರಿ ಸ್ಕೂಲ್ ನಲ್ಲಿ ಜೊತೆಗೆ ಓದುತ್ತಿದ್ದವನೊಬ್ಬ ' ಹೆ.. ಅರಾಮೇನೋ, ನನ್ನ ನೆನಪಿದ್ಯಾ ಅಥವಾ ಮರೆತು ಬಿಟ್ಯಾ' ಅಂತ ಕೇಳಿದಾಗ ಅವನ ಹೆಸರಿಗಾಗಿ
ತಡಬಡಾಯಿಸಿರುತ್ತೇವೆ. ಕೊನೆಗೂ ಅವನ ಹೆಸರು ತೋಚದೆ  ಅವನೇ ಮತ್ತೆ ನೆನಪಿಸಿದಾಗ, ಛೆ ಅವನಿಗೆ ಬೇಜಾರಾಯಿತೇನೋ ಅಂತ ಮರುಗಿರುತ್ತೇವೆ. ಹೊಸದಾಗಿ ಮದುವೆಯಾದ ಗೆಳೆಯನೊಬ್ಬ ಹೆಂಡತಿಯನ್ನ ಪರಿಚಯ ಮಾಡಿಸಲೋ ಅಥವಾ ಕಾಣದಂತೆ ಇದ್ದುಬಿಡಲೋ ಅಂತ ಗೊಂದಲಕ್ಕೆ ಬಿದ್ದಿರುತ್ತಾನೆ. ಅಂತೂ ಗುರುತಿದ್ದವರನ್ನ ಮಾತಾಡಿಸಿ ಬಸ್ಸಿನ ಸೀಟನ್ನ ಹಿಂದೆ ಮಾಡುತ್ತಿದ್ದಂತೆ, ಕಾಲೇಜಿನ ಕಣ್ಮಣಿಯಾಗಿದ್ದ ಅವಳು ಕಾಣಿಸಿಬಿಟ್ಟಿರುತ್ತಾಳೆ. ಹೋಗಿ ಮಾತಾಡಿಸಲಾ? ಗುರುತಿರಬಹುದಾ ಇಲ್ಲವಾ ಅನ್ನೋ ಗುಮಾನಿ.  ಕಂಡು ನಕ್ಕರೆ ಬಸ್ಸಿನಲ್ಲಿ ಸಿಹಿ ನಿದ್ದೆ. ಕಂಡು ಯಾರೆಂದು ಗುರುತೇ ಇಲ್ಲದಂತೆ ಮುಖ ತಿರುಗಿಸಿದರೆ  ಬೆಳಿಗ್ಗೆಯ ತನಕ ಸೀಟಿನಲ್ಲಿ ಹೊರಳಾಡಿ ಮೈ ಕೈ ನೊವು.

ಊರು ನಮ್ಮ ಪಾಲಿಗೆ ಒಂದು ಐಡೆಂಟಿಟಿ. ಊರಿನ ಬಗ್ಗೆ ಬೆಂಗಳೂರಿನ ಗೆಳೆಯರಿಗೆ ನೂರಾರು ಕಥೆ ಹೇಳಿರುತ್ತೇವೆ. ಜೋಗಕ್ಕೆ ಬರುವಾಗ ನಿಮ್ಮ ಊರಿಗೆ ಬಂದಿದ್ದೆ, ಹಂಪಿ ನೋಡುವಾಗ ನಿಮ್ಮ ಊರು ಸಿಕ್ಕಿತ್ತು. ಮುರುಡೇಶ್ವರದ ಪಕ್ಕ ಇರೋದೇ ನಿಮ್ಮ ಊರಾ? ಅಂತೆಲ್ಲಾ ಕೌತುಕದಿಂದ ಯಾರಾದರೂ ಕೇಳುತ್ತಿದ್ದರೆ, ಆ ಜಾಗಗಳೆಲ್ಲಾ ನಾವು ಸಣ್ಣವರಿದ್ದಾಗಲೇ ಓಡಾಡಿದ ಜಾಗವೆಂದು ಹೆಮ್ಮೆ ಎನಿಸುತ್ತದೆ.  ಹೊಸದಾಗಿ  ಯಾರಾದರೂ ಪರಿಚಯವಾದರೆ ಯಾವ ಊರು ಅಂತ ತಕ್ಷಣ ಕೇಳಿರುತ್ತೇವೆ. ತಮ್ಮದೇ ಊರಾದರೆ ಅಥವಾ ಹತ್ತಿರದ ಊರಾದರೆ ಅವರೊಡನೆ ಮಾತಾಡುವ ರೀತಿಯೇ ಬೇರೆಯಾಗಿಬಿಡುತ್ತದೆ. ಊರಿನ ಪರಿಚಯದವರ ಬಗ್ಗೆ, ಓದಿದ ಕಾಲೇಜಿನ ಬಗ್ಗೆ, ಯಾವುದೊ ಲೋಕಲ್ ಹೊಡೆದಾಟದ ಬಗ್ಗೆ, ಹೀಗೆ ತಕ್ಷಣ ಮಾತು ಹರಿದಾಡಿರುತ್ತದೆ . ಬೆಂಗಳೂರಿನವರಾದರೆ ಇದೆಲ್ಲದರ ಅನುಭವ ಆಗಿರಲಿಕ್ಕಿಲ್ಲ. ಬೃಹತ್ ಬೆಂಗಳೂರಿನಲ್ಲಿ ಎಷ್ಟೋ ನಗರಗಳು.. ಎಷ್ಟೋ ಕಾಲೇಜುಗಳು.. ಪಕ್ಕದ ಮನೆಯವರ ಪರಿಚಯ ಎಷ್ಟೋ!

ಬಸ್ಸು ಅರಸೀಕೆರೆಗೆ  ಬಂದು ನಿಲ್ಲುತ್ತದೆ, ತಕ್ಷಣ 'ಟೀ ಕಾಫಿ ಊಟ ಐದೇ ನಿಮಿಷ  ಐದು ನಿಮಿಷ ಅಷ್ಟೇ ಬೇಗ ಬೇಗ' ಅಂತ ಪ್ರತಿ ಬಸ್ಸಿಗೂ ಬಡಿದು ಬಡಿದು ಗಾಡ ನಿದ್ರೆಯಲ್ಲಿದ್ದವರನ್ನೆಲ್ಲಾ ಎಬ್ಬಿಸಿರುತ್ತಾನೆ ಅಲ್ಲಿನ ಹೋಟೆಲಿನ ಹುಡುಗ. ಕಟ್ಟಿಕೊಂಡಿದ್ದನ್ನೆಲ್ಲಾ ಹೊರ ಹಾಕಿದರೆ ಒಮ್ಮೆ ನಿರಾಳ. ಹಸಿದಿದ್ದರೆ ಏನನ್ನಾದರೂ ತಿಂದು ಮತ್ತೆ ಬಸ್ ಹತ್ತಿದರೆ ಊರಿನ ನೆನಪಲ್ಲಿ, ಬೆಂಗಳೂರು ಬಿಟ್ಟು ಹೊರಬಂದ ಖುಷಿಯಲ್ಲಿ ನೆಮ್ಮದಿಯ ನಿದ್ದೆ. ಮತ್ತೆ ಬಸ್ಸು ಹೊರಡುತ್ತದೆ ಊರಿನ ಕಡೆಗೆ. ಎಚ್ಚರವಾದಾಗ ಬೆಳಕು ಹರಿಯಲಾರಂಭಿಸಿರುತ್ತೆ . ಕಿಟಕಿಯ ಪರದೆ ಸರಿಸಿದರೆ ಕಣ್ ತುಂಬಾ ಹಸಿರು. ಊರೆಲ್ಲೊ ಹತ್ತಿರದಲ್ಲಿದೆ. ಪರದೆ ಮುಚ್ಚುವ ಮನಸ್ಸಾಗುವುದಿಲ್ಲ. ಪ್ರತಿ ಮೈಲಿಗಲ್ಲನ್ನೂ ನೋಡಿ ಇನ್ನೆಷ್ಟು ದೂರವಿದೆ ಎಂದು ನೋಡುವ ಆತುರ. ಕೊನೆಗೂ ಊರು ಬಂದು ಬಸ್ ಇಳಿಯುತ್ತಿದ್ದಂತೆ, ತಲೆಯ ಮೇಲಿದ್ದ ಜವಾಬ್ದಾರಿಯನ್ನೆಲ್ಲಾ ಬಿಟ್ಟು ನಿರಾಳವಾದ ಅನುಭವ. ನೆಮ್ಮದಿಯನ್ನ ಅರಸಿ ಊರಿಗೆ ಬಂದವನಿಗೆ ಅಲ್ಲಿದ್ದಷ್ಟು ಹೊತ್ತೂ ನೆಮ್ಮದಿ. ಇಲ್ಲೇ ಇದ್ದರೆ ಸುಖವಲ್ಲವೇ ಅನ್ನೋ ಮುಗಿಯದ ದ್ವಂದ್ವ. ಒಟ್ಟಿನಲ್ಲಿ ಇನ್ನೆರಡು ದಿನ ಊರಿನ ಮಡಿಲಲ್ಲಿ ಬೆಚ್ಚಗಿನ ಜೀವನ.

--
ಅಕ್ಷಯ್ ಪಂಡಿತ್, ಸಾಗರ
೧/೧೭/೨೦೧೪








ನವೆಂಬರ್ 17, 2013

ಪದ್ದಿ ಅಂಗಡಿ

                                                                  ಪದ್ದಿ ಅಂಗಡಿ 





[ಲೋಕದರ್ಶನ ದೀಪಾವಳಿ ವಿಶೇಷಾಂಕ ೨೦೧೩ರಲ್ಲಿ ಪ್ರಕಟವಾದ ಕಥೆ]

'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅವನಾಡಿದ ಮಾತು ಅವಳ ತಲೆಯಲ್ಲಿನ್ನೂ ಕೊರೆಯುತ್ತಿತ್ತು. ಇದಕ್ಕಿಂದ ಸಾವಿರ ಪಾಲು ಕೆಟ್ಟ ಬೈಗುಳ ಕೇಳಿದ ಅವಳಿಗೆ ಇದೇನು ಅಂತಹ ಬೈಗುಳ ಅಲ್ಲದಿದ್ದರೂ ಹೇಳಿದ್ದು ಅವನಾಗಿದ್ದರಿಂದ, ಕೇಳಿದ್ದು ನಿಜವಾಗಿದ್ದರಿಂದ ಆ ಮಾತು ಅವಳಲ್ಲಿ ನಾಟಿತ್ತು. ಅಲ್ಲಿಂದ ಎದ್ದು ಹೋಗಿ ಅಂಗಡಿಯ ಹಿಂಬದಿಯ ಕತ್ತಲಲ್ಲಿ ಕಳೆದುಹೊಗಿದ್ದಳು.

ಮಣ್ಣಿನ ಗೋಡೆಯ, ಹಂಚಿನ ಮಾಡಿನ ಸಣ್ಣದೊಂದು ಅಂಗಡಿ. ಪಕ್ಕದಲ್ಲೇ ಹಾದು ಹೋಗುವ ಹೈವೇ ನಲ್ಲಿ ಒಂದಾದರ ಮೇಲೊಂದು ಸಾಲಾಗಿ  ಹೋಗುತ್ತಿರುವ  ಟ್ರಕ್ಕುಗಳು  ಪ್ರತಿಬಾರಿ ಅಂಗಡಿ ದಾಟಿಕೊಂಡು ಹೋದಾಗಲೂ ಅಂಗಡಿಯ ಬಾಗಿಲಿಂದ ಇಣುಕುವ ಟ್ರಕ್ಕಿನ ಹೆಡ್ ಲೈಟ್  ಬೆಳಕು ಬಿಟ್ಟರೆ ಅಂಗಡಿಯೊಳಕ್ಕೆ ಪದ್ದಿ ನಿಲ್ಲುವಲ್ಲಿ ಮತ್ತು ಗಿರಾಕಿಗಳು ಕುಳಿತುಕೊಳ್ಳುವ ಎದುರುಗಡೆ ಬೆಂಚಿನ ಜಾಗದಲ್ಲಿ ಮಾತ್ರ ಎರಡು ಝೀರೋ ಕ್ಯಾಂಡಲ್ ಬಲ್ಬ್ ಗಳ ಕುರುಡು ಬೆಳಕು. ಅವಾಗವಾಗ ಟ್ರಕ್ಕುಗಳು ಬಂದು ನಿಂತಾಗ ಅದರಿಂದಿಳಿಯುವ ಹಿಂದಿ, ಪಂಜಾಬಿ ಮಾತನಾಡುವ ಡ್ರೈವರ್ ಗಳನ್ನ ಬಿಟ್ಟರೆ ಪಕ್ಕದೂರಿಂದ ಕೆಲವೇ ಜನ ಇಲ್ಲಿಗೆ ಬರುತ್ತಿದ್ದರು, ಊರವರ ಕಣ್ತಪ್ಪಿಸಿ ಕುಡಿಯಲು. ಪದ್ದಿಯ ಹಳೆಯ ಮಬ್ಬು ಸೀರೆಗೆ ಹೊಳಪು ಕೊಡುತ್ತಿರುವ ಕುರುಡು ಬಲ್ಬಿನಡಿಯಲ್ಲಿ ಅವಳು  ಕೆಲವರಿಗೆ ಹೆಂಡದ ಪ್ಯಾಕೆಟ್ಟನ್ನು ಕೊಡುತ್ತಿದ್ದರೆ, ಇದ್ದಿದ್ದರಲ್ಲೇ ಸ್ವಲ್ಪ ದುಡ್ಡಿರುವವರಿಗೆ, ರಮ್ಮಿನ ಸೇವೆ ಮಾಡುತ್ತಿದ್ದಳು. ಗಿರಾಕಿ ಕಳ್ಳಗಣ್ಣಲ್ಲಿ ಇವಳ ಸೊಂಟ ನೋಡುವುದರಲ್ಲಿ ಮಗ್ನನಾಗಿರುವಾಗ ಪದ್ದಿ ರಮ್ಮಿಗೆ ನೀರು ಬೆರೆಸಿ ಉಳಿದದ್ದರಲ್ಲಿ ಬರುವ ಲಾಭ ಎಣಿಸಿಕೊಂಡಿರುತ್ತಿದ್ದಳು. ಆ ಅಂಗಡಿ ಆ ಊರವರಿಗೆ ಮತ್ತು ಅವರಿವರಿಂದ ಕೇಳಿ ಬರುತ್ತಿದ್ದ ಟ್ರಕ್ ಡ್ರೈವರ್ ಗಳಿಗಷ್ಟೇ ಗೊತ್ತಿತ್ತೇ ಹೊರತು ಮತ್ಯಾರಿಗೂ ಅದು ಹೆಂಡದಂಗಡಿ ಅನ್ನೋ ಸುಳಿವೂ ಸಿಗುತ್ತಿರಲಿಲ್ಲ. ಎಲ್ಲಾ ಹೆಂಡದಂಗಡಿಯ ಮುಂದೆಯೂ ಇರುವಂತೆ ಇವಳ ಅಂಗಡಿಗೆ 'ಸಾರಾಯಿ ಅಂಗಡಿ' ಅನ್ನೋ ಬೋರ್ಡು ಇರಲಿಲ್ಲ. ಆದರೆ ಊರವರೆಲ್ಲಾ ಆ ಅಂಗಡಿಗೆ ನಾಮಕರಣ ಮಾಡಾಗಿತ್ತು. 'ಪದ್ದಿ ಅಂಗಡಿ' ಅಂತ.

ಮಂಗಳೂರಿನಿಂದ ಗೋವಾಕ್ಕೆ ಹೋಗುವ ಹೆದ್ದಾರಿಯಲ್ಲಿರುವ ಹೊನ್ನಾವರಕ್ಕೆ ತಾಕಿಕೊಂಡಿರುವ ಕಾಸರಕೋಡಿನಲ್ಲಿ ಪದ್ದಿಯ ಮನೆ. ಮನೆಯಿಂದ ಒಂದು ಮಾರು ನಡೆದರೆ, ಅರಬ್ಬೀ ಸಮುದ್ರ. ಕಡಲ ಶಬ್ದ ನಿರಂತರವಾಗಿ ಕೇಳುತ್ತಿತ್ತು. ಫ್ಯಾನ್ ಇಲ್ಲದೆ ಯಾರೂ ನಿದ್ದೆ ಮಾಡಲಾಗದ ಆ ಕರಾವಳಿಯ  ಸೆಕೆಯಲ್ಲಿ ಬೆಳಿಗ್ಗೆಯ ಸುಡುವ ಬಿಸಿಲಿನ ಹೊತ್ತು ಪದ್ದಿ ಮೈ ಮರೆತು ಮಲಗುತ್ತಿದ್ದಳು . ಅವಳ ಮನೆ,  ಅಂಗಡಿಗಿಂತಲೂ ಚಿಕ್ಕದಾದ ಒಂದು ಗುಡಿಸಲು. ಅದಕ್ಕೊಂದು ಗಿಡದ ಬೇಲಿ, ಬಾಗಿಲಿನ ಎದುರಿಗೆ ಸರಗೊಲಿನ ಗೇಟು, ಹಿಂಭಾಗದಲ್ಲೊಂದು ಸರ್ಕಾರದವರು ಕಟ್ಟಿಸಿಕೊಟ್ಟಿರೋ ಶೌಚಾಲಯ, ಅದರೆದುರಿಗೊಂದು ನೀರಿನ ಗುಂಡಿ ಇಷ್ಟು ಬಿಟ್ಟರೆ ಸಾವಿತ್ರಮ್ಮನ ಮನೆಯಲ್ಲಿ ನೋಡಿ ಇಷ್ಟಪಟ್ಟು ಕೇಳಿ ತಂದು ಮನೆಯ ಎದುರಿಗೆ ನೆಟ್ಟಿರೋ ಹಳದಿ ದಾಸವಾಳದ ಹೂವಿನ ಗಿಡ. ಪದ್ದಿ ಆ ಗಿಡದಲ್ಲಿ ಯಾವತ್ತೂ ಈಗಷ್ಟೆ ಅರಳಿರುವ ದಾಸವಾಳ ನೋಡಿಲ್ಲ. ರಾತ್ರಿ ಮೂರಕ್ಕೆ ಬಂದು ಮಲಗಿ ಮಧ್ಯಾನ್ಹ ಏಳುವ ಹೊತ್ತಲ್ಲಿ, ಅದಾಗಲೇ ದಾಸವಾಳ ಅರಳಿ ಇನ್ನೇನು ಬಾಡುವಂತಾಗಿರುತಿತ್ತು.

ಎದ್ದ ತಕ್ಷಣ ಮನೆಯಲ್ಲೇ ಕೋಡುಬಳೆ, ಚಕ್ಕಲಿ ತಯಾರಿ ಮಾಡಿಕೊಂಡು, ಮಾಡಿಟ್ಟ ಉಪ್ಪಿನಕಾಯನ್ನ ಒಂದು ಡಬ್ಬದಲ್ಲಿ ಹಾಕಿ ತನ್ನ ಅಂಗಡಿ ಸೇರುತ್ತಿದ್ದಳು. ಅವಳು ಮಾಡುವ ಉಪ್ಪಿನಕಾಯಿಯ ರುಚಿಗೋ ಅಥವಾ ಗಿರಾಕಿಗಳ ಬಳಿ ಚಕ್ಕಲಿ, ಕೊಡುಬಳೆಗೆ ದುಡ್ಡಿರುತ್ತಿರಲಿಲ್ಲವೋ, ಒಟ್ಟಿನಲ್ಲಿ ಉಪ್ಪಿನಕಾಯಿ, ಸಾರಾಯಿಯ ಜೊತೆ  ಭರ್ಜರಿಯಾಗಿ ವ್ಯಾಪಾರವಾಗುತ್ತಿತ್ತು.  ಅವಳು ಅಂಗಡಿಗೆ ಬರುವ ಸರಿಹೊತ್ತಲ್ಲಿ, ಹೊನ್ನಾವರದ ಬಾರೊಂದರಿಂದ ಸತ್ಯಣ್ಣ ರಮ್ಮಿನ ಬಾಟಲಿ, ಹೆಂಡದ ಪಾಕೆಟ್ ಎರಡನ್ನೂ ಒಂದು ರಿಕ್ಷಾ ದಲ್ಲಿ ಹಾಕಿಕೊಂಡು ತರುತ್ತಿದ್ದ.  ಅದನ್ನೆಲ್ಲಾ ಒಳಗೆ ರಾಶಿ ಹಾಕುತ್ತಿದ್ದಳು. ನಿನ್ನೆಯ ಗ್ಲಾಸುಗಳ ರಾಶಿಯಲ್ಲಿ ಒಂದಾದರೂ ಒಡೆದ ಗ್ಲಾಸು ಇರುತ್ತಿತ್ತು. ಒಡೆದ ಅನಾಮಿಕನಿಗೊಂದಿಷ್ಟು ಬೈಗುಳಗಳ ಸುರಿಮಳೆಯಾಗುತ್ತಿತ್ತು. ಬೆಂಚುಗಳು ಎಲ್ಲೆಂದರಲ್ಲಿ ಹೊರಳಿಕೊಂಡಿರುತ್ತಿತ್ತು. ನೆಲದ ತುಂಬಾ ಹೆಂಡದ ಕೊಟ್ಟೆಗಳ ರಾಶಿ. ಅಂಗಡಿಯ ಹೊರಗಡೆ ಯಾರೋ ಹೆಚ್ಚು ಕುಡಿದು ಮಾಡಿಕೊಂಡ ವಾಂತಿ, ಸಿಗರೇಟಿನ ತುಂಡುಗಳು, ಎಲ್ಲವನ್ನೂ ಒಂದು ಹಂತಕ್ಕೆ ತಲುಪಿಸಿ ಅಂಗಡಿ ಬಾಗಿಲು ತೆರೆಯುವುದರಲ್ಲಿ ಸುಮಾರು ಸಂಜೆ ಆರು ಗಂಟೆ. ಪದ್ದಿ ಅಂಗಡಿ ಕಡೆ ಮುಖ ಮಾಡುವವರಿಗೆ ಸುಮಹೂರ್ತ ಒದಗಿ ಬಂದಂತೆ. 

ಪದ್ಮಾ ಅಂತ ಅವಳ ಹೆಸರನ್ನ ಪೂರ್ತಿ ಕೇಳಿದ್ದು ಯಾವತ್ತೂ ಇಲ್ಲ. ಸಣ್ಣ ವಯಸ್ಸಿನಲ್ಲೇ ಮನೆ ಕೆಲಸಕ್ಕೆ ಹೋಗುತ್ತಿದ್ದ ಅವಳನ್ನ ಎಲ್ಲರೂ ಪದ್ದಿ ಅಂತ ಕರೆದಿದ್ದೇ. ಇವತ್ತಿನ ತನಕ ಅವಳೆಷ್ಟೇ ದೊಡ್ಡವಳಾದರೂ ಅವಳ ಹೆಸರು ಮಾತ್ರ ಹಾಗೇ ಉಳಿದಿತ್ತು. ಮನೆ ಕೆಲಸ ಮಾಡುತ್ತಾ ಮಾಡುತ್ತಾ, ದೊಡ್ದವಳಾದಂತೆ ಊರಲ್ಲಿ ಯಾರದೇ ಮಗುವಾದರೂ ಬಾಣಂತನ ಮಾಡಿಸುವುದು ಅವಳ ಜವಾಬ್ದಾರಿಯಾಗಿಬಿಟ್ಟಿತ್ತು. ಮಗುವನ್ನ ಸ್ನಾನ ಮಾಡಿಸುವುದು ಅವಳಿಗೆ ಎಲ್ಲಿಲ್ಲದ ಖುಷಿ. ಮಗುವಿನ ದೇಹವನ್ನ, ತಲೆಯನ್ನ ತಿಕ್ಕಿ ತೀಡಿ ತಾನೇ ಆಕೃತಿ ಕೊಡುತ್ತಿರುವಂತೆ ಬೀಗುತ್ತಿದ್ದಳು. ಇಡೀ ಕೇರಿಯ ಎಲ್ಲಾ ಮಕ್ಕಳನ್ನೂ ತಾನೇ ದೊಡ್ಡ ಮಾಡಿದೆನೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು.

ಮದುವೆ ಮಾಡಿಕೊಂಡ ಒಂದೇ ವರ್ಷಕ್ಕೆ ಗಂಡ ಇವಳನ್ನ ಬಿಟ್ಟು ಹೇಳದೇ ಕೇಳದೆ ಮುಂಬೈ ಗೆ ಹೋಗಿದ್ದ. ಅದಾದ ಮೇಲೆ ಅವನ ಸುದ್ದಿಯಿರಲಿಲ್ಲ. ಅವಳೂ ತಲೆ ಕೆಡಿಸಿಕೊಂಡಿರಲಿಲ್ಲ. ಅದೊಂದು ವಿಷಯವೇ ಅಲ್ಲವೇನೋ ಅನ್ನುವಂತೆ ವರ್ಷಗಟ್ಟಲೇ ತನ್ನಷ್ಟಕ್ಕೆ ತಾನಿದ್ದ ಪದ್ದಿ, ಮಗಳು ಪಕ್ಕದ ಕೇರಿಯ ಸ್ಕೂಲ್ ಮಾಸ್ತರರ ಮಗನ ಜೊತೆ ಓಡಿ ಹೋಗಿದ್ದಾಳೆನ್ನುವ ಸುದ್ದಿ ತಿಳಿದಾಗ ಮಾತ್ರ ಕಂಗಾಲಾಗಿ ಕೂತಿದ್ದಳು. ಮಾಸ್ತರರ ಮನೆಯಲ್ಲಿ ಒಪ್ಪದ ಕಾರಣ ಇಬ್ಬರೂ ಫೋನ್ ನಂಬರ್, ವಿಳಾಸ ಕೊಡದಂತೆ ಬೆಂಗಳೂರಿಗೆ  ಹೋಗಿದ್ದರು. ಊರಿನ ಎಲ್ಲಾ ಕೇರಿಯ ಎಲ್ಲರ ಮನೆಯಲ್ಲೂ ಕೆಲಸ ಮಾಡಿಕೊಂಡು ಅವರೆಲ್ಲರ ಜೊತೆ ಖುಷಿಯಾಗಿದ್ದ ಪದ್ದಿಗೆ ಅವತ್ತು ಇದ್ದಕ್ಕಿದ್ದಂತೆ ಊರಿನಿಂದ ಬಹಿಷ್ಕಾರ ಹಾಕಿದಂತಿತ್ತು. ಊರಿಗೆ ಊರೇ ಅವಳೊಡನೆ ಮಾತಾಡುವುದನ್ನ ನಿಲ್ಲಿಸಿದಂತಿತ್ತು. ಮಾತನಾಡಿದರೂ ಮಗಳು ಓಡಿ ಹೋದಳಂತೆ ಅನ್ನುವುದರಿಂದಲೇ ಪ್ರಾರಂಭವಾಗುತ್ತಿದ್ದ ಮಾತು ಅವಳನ್ನ ಹಿಂಡಿ ಹಿಪ್ಪೆ ಮಾಡುತ್ತಿತ್ತು. ಮಾತನ್ನ ನಿಲ್ಲಿಸಿದ್ದಳು. ಅವಳೇ ದೊಡ್ಡ ಮಾಡಿದ ಮಕ್ಕಳು ಕೂಡ ಪದ್ದಿ ಮಗಳು ಓಡಿ ಹೋಗಿದಾಳಂತೆ ಅಂತ ರಸ್ತೆಯಲ್ಲಿ ಮಾತನಾಡಿಕೊಂಡು ತಿರುಗಾಡುವಾಗ ಅವಳಿಗೆ ಹೊರಗೆ ತಿರುಗಾಡುವ ಧೈರ್ಯವೂ ಇರಲಿಲ್ಲ. ಯಾರ ಮನೆಯಲ್ಲೂ ಕೆಲಸಕ್ಕೂ ಕರೆಯುತ್ತಿರಲಿಲ್ಲ. 

ಅಂತಹ ಸಮಯದಲ್ಲಿ ಅವಳ ಬೆಂಬಲಕ್ಕೆ ಅಂತ ನಿಂತಿದ್ದು ಸತ್ಯಣ್ಣ. ಸತ್ಯಣ್ಣ ಅವಳಿಗೆ ಹಳೆಯ ಪರಿಚಯ, ಹೆಂಡದಂಗಡಿ ನಡೆಸುತ್ತಿದ್ದ  ಸತ್ಯಣ್ಣ ಏನಾದರೂ ವ್ಯಾಪಾರ ಶುರು ಮಾಡಬೇಕೆಂದಿದ್ದ. ಇವಳ ಅಸಹಾಯಕ ಸ್ಥಿತಿ ನೋಡಿದ್ದೇ ಇವಳನ್ನ ಅಂಗಡಿ ನೋಡಿಕೊಳ್ಳಲು ಬಿಟ್ಟರೆ, ತಾನು ಬೇರೆ ಕೆಲಸ ಮಾಡಬಹುದೆಂದು, ಇವಳನ್ನ ಹೆಂಡದಂಗಡಿ ನೋಡಿಕೊಳ್ಳುವಂತೆ ಕೇಳಿದ್ದ. ಬರೀ ಗಂಡಸು ಗಿರಾಕಿಗಳಿಂದಲೇ ತುಂಬಿ ತುಳುಕುವ, ರಾತ್ರಿಯಿಡಿ ಅವರ ನಶೆಯಲ್ಲಿ ಅವರಿಗೆ ಹೆಂಡದ ಸೇವೆ ಮಾಡುವ ಕೆಲಸ ನೆನೆದು ಹೆದರಿದ್ದ ಅವಳಿಗೆ, ಅವಳ ಅಂಗಡಿಯಲ್ಲೇ ಸೀನನಿಗೆ ಇರಲು ಹೇಳಿ, ಯಾರಾದರೂ  ಕೆಟ್ಟದಾಗಿ ಮಾತನಾಡಿದರೆ, ಅತಿ ಸಲಿಗೆ ತೋರಿಸಿದರೆ, ಮುಟ್ಟಲು ಬಂದರೆ ತಕ್ಷಣ ಹೇಳುವಂತೆ ಹೇಳಿ ಅವಳಲ್ಲಿ ಕೆಲಸ ಮಾಡುವಂತೆ ಒಪ್ಪಿಸಿದ್ದ. ಪದ್ದಿ ಅಂಗಡಿ ನೋಡಿಕೊಳ್ಳಲು ಶುರು ಮಾಡಿದ ಮೇಲೆ ಗಿರಾಕಿಗಳೂ ಹೆಚ್ಚಾದರು. ಮೊದಮೊದಲಂತೂ ಸತ್ಯಣ್ಣನಿಗೆ ದಿನವೂ ಫೋನ್ ಬರುತ್ತಿತ್ತು. ಅವನೊಂದು ಗುಂಪು ಕಟ್ಟಿಕೊಂಡು ಬಂದು ಅವರಿವರಿಗೆ ಬಡಿದು ಹೋಗುತ್ತಿದ್ದ. ಒಂದು ತಿಂಗಳಾಗುವಷ್ಟರಲ್ಲಿ ಅವಳಿಗೆ ಸತ್ಯಣ್ಣನ ಬೆಂಬಲವಿದೆ ಎಂದು ತಿಳಿದ ಮೇಲೆ ಯಾರೂ ಅವಳ ಸುದ್ದಿಗೆ ಹೋಗುತ್ತಿರಲಿಲ್ಲ. ಅವರವರ ಕುಡಿತದಲ್ಲಿ, ಅವರವರ ಚಿಂತೆಯಲ್ಲಿ ಮುಳುಗಿರುತ್ತಿದ್ದರು. ಹೊರಗಿಂದ ಬರುತ್ತಿದ್ದವರಾರೂ ಗೊತ್ತಿಲ್ಲದ ಜಾಗದಲ್ಲಿ ಅವಳನ್ನ ರೇಗಿಸಿ ಇಕ್ಕಟ್ಟಿಗೆ ಸಿಲುಕಿಕೊಳ್ಳಲು ಇಷ್ಟ ಪಡುತ್ತಿರಲಿಲ್ಲ. ಆದರೂ ದೂರದಿಂದಲೇ ನೋಡಿ ಆ ವಯಸ್ಸಲ್ಲೂ ಮೂವತ್ತರ ಹಾಗಷ್ಟೇ ಕಾಣಿಸುವ ಅವಳ ಮೈಕಟ್ಟನ್ನ ನೋಡಿ ಜೊಲ್ಲು ಸುರಿಸುವವರೇನು ಕಮ್ಮಿ ಇರಲಿಲ್ಲ. ಹೀಗೆ ಬರುತ್ತಾ ಬರುತ್ತಾ ಸತ್ಯಣ್ಣನ ಹೆಂಡದಂಗಡಿ, ಬಾಯಿಂದ ಬಾಯಿಗೆ ಪದ್ದಿ ಅಂಗಡಿ ಆಗಿ ಹರಿದಾಡಿತ್ತು.

ಅವಳಿಗೆ ಮೊದಮೊದಲು ಈ ಕೆಲಸ ಇಷ್ಟವಾಗುತ್ತಿರಲಿಲ್ಲ. ಎದುರಿಗೆ ಕೆಟ್ಟದಾಗಿ ಮಾತನಾಡದಿದ್ದರೂ ಹಿಂದಿಂದ ಜನ ಕೆಟ್ಟದಾಗಿ ಮಾತನಾಡುತ್ತಾರೆಂದು ಹೊಸತಾಗಿ ಹೇಳಬೇಕಿರಲಿಲ್ಲ. ದುರುಗುಟ್ಟಿ ನೋಡುತ್ತಿದ್ದರು, ಮುಜುಗರವಾಗುತ್ತಿತ್ತು. ಅಸಹ್ಯ ಬೈಗುಳಗಳೆಲ್ಲ ಕೇಳಬೇಕಾಗಿತ್ತು. ನಿಧಾನವಾಗಿ ಪ್ರಾರಂಭವಾಗುತ್ತಿದ್ದ ಚರ್ಚೆಗಳು, ಮಾತು ಕಥೆಗಳು ಜಗಳಗಳಾಗಿ ಪರಿವರ್ತನೆಯಾಗುತ್ತಿತ್ತು, ಹೊಡೆದಾಟವಾಗಿ ಮುಗಿಯುತ್ತಿತ್ತು. ಊರಿನವರಾರೂ ಮಾತನಾಡಿಸದೇ ಹೋದರೂ, ಊರಿನ ಕಥೆಯಷ್ಟೂ ಇಲ್ಲಿ ಚರ್ಚೆಗೊಳ್ಳುತ್ತಿತ್ತು. ಗೊತ್ತಿದ್ದವರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೂ ಅದನ್ನ ತೋರಿಸುತ್ತಿರಲಿಲ್ಲ. ಎಷ್ಟು ಗೊತ್ತಾಗುತ್ತದೋ ಅಷ್ಟೇ. ಮಕ್ಕಳ ಮೈ ತಿಕ್ಕಿ ಧೂಪ ಹಚ್ಚಿ ನಿದ್ದೆ ಮಾಡಿಸುತ್ತಿದ್ದ ಪದ್ದಿ, ಈಗ ಜನರಿಗೆ ನಶೆ ಹತ್ತಿಸಿ ನಿದ್ದೆ ಮಾಡಿಸುತ್ತಿದ್ದಳು. ಅಸಹ್ಯದ ಕೆಲಸ ಎನ್ನಿಸಿದರೂ ಹೊಟ್ಟೆ ಪಾಡು ಸಾಗಲೇ ಬೇಕಿತ್ತು.  ಬರಬರುತ್ತಾ ಪ್ರತಿ ದಿನವೂ ಮತ್ತೆ ಹಿಂದಿನ ದಿನದ ಪುನರಾವರ್ತನೆಯಷ್ಟೇ ಎಂದೆನಿಸಿ ಕೆಲಸ ಅಭ್ಯಾಸ ಮಾಡಿಕೊಂಡಳು.

ಕಾಸರಕೋಡಿನ ಐಸ್ ಫ್ಯಾಕ್ಟರಿ ಶ್ರೀನಿವಾಸರಾಯರ ಮಗ ಅವತ್ತು ಅಲ್ಲಿಗೆ ಬಂದಿದ್ದ. ಪದ್ದಿ ಅಂಗಡಿಗೆ. ಹೊನ್ನಾವರದಲ್ಲೋ, ಕುಮಟಾದಲ್ಲೋ ಬಾರಿಗೆ ಹೋದರೆ ಮಾರನೆಯ ದಿನವೇ ಸುದ್ದಿ ಅಪ್ಪನಿಗೆ ಗೊತ್ತಾಗಿ ರಂಪಾಟವೇ ಅಗಿಬಿಡುತ್ತೆಂದು ಅವನಿಗೆ ಗೊತ್ತಿತ್ತು. ಅದಕ್ಕೆಂದೇ ತನ್ನ ಪರಿಚಯದವರಾರೂ ಇಲ್ಲಿ ಬರಲಿಕ್ಕಿಲ್ಲ ಅಂತ ಪದ್ದಿ ಅಂಗಡಿಗೆ ಬಂದಿದ್ದ. ಪದ್ದಿಯ ಕೌಂಟರ್ ಬಳಿ ಬಂದು ತನಗೆ ತನ್ನ ಗೆಳೆಯರಿಗೆ ರಮ್ಮಿನ ಆರ್ಡರ್ ಕೊಟ್ಟಿದ್ದ. ಶ್ರೀನಿವಾಸರಾಯರ ಮಗ ತನ್ನ ಅಂಗಡಿಗೆ ಬಂದದ್ದು ನೋಡಿ ಒಂದು ಕ್ಷಣ ಏನೂ ತೋಚದವಳಂತೆ ನಿಂತಿದ್ದಳು ಪದ್ದಿ.

ಅವನ ಮುಖ ಅವಳಿಗೆ ಹೊಸತಲ್ಲ. ಸುಮಾರು ಇಪ್ಪತ್ತು ವರ್ಷದ ಹಿಂದೆ ಅವಳು ಅವನನ್ನ ಮೊದಲು ನೋಡಿದಾಗ ಅವನ ಕಣ್ಣುಗಳಲ್ಲಿ ಅಪರಿಚಿತವಾದ ಹೊಸತನ್ನೇನೋ ನೋಡುವ ಗಾಬರಿ, ಅಗಲ ಹಣೆ, ಅಮ್ಮನನ್ನೇ ಹೋಲುವ ಚಪ್ಪಟೆ ಮೂಗು, ಮೃದು ಗಲ್ಲದಲ್ಲಿ ಇನ್ನೂ ಕೆಂಪು ಹಾಗೇ ಇತ್ತು. ಆಗ ಅವಳಿಗಿನ್ನೂ ಇಪ್ಪತೈದು. ಹಲ್ಲಿಲ್ಲದ ಬೊಚ್ಚ ಬಾಯಲ್ಲಿ ಇವಳನ್ನ ನೋಡಿ ಮುಗುಳ್ನಗೆ ಬೀರಿದ್ದ ಪ್ರಶಾಂತ. ಅವನ ಕೈ ಮುಷ್ಠಿ ಬಿಡಿಸಿ ಅದರಲ್ಲಿ ಹತ್ತು ರುಪಾಯಿ ನೋಟನ್ನಿಟ್ಟು ಮುಷ್ಠಿ ಮತ್ತೆ ಕಟ್ಟಿಸಿದ್ದಳು. ರಾಯರ ಹೆಂಡತಿ ಶಾರದಮ್ಮ ಬಾದಾಮಪುರಿ ಕೊಟ್ಟು, ನಾಳೆಯಿಂದ ಮನೆ ಕೆಲಸದ ಜೊತೆ ಮಗು ಮೀಸಲಿಕ್ಕೂ ನೀನೇ ಬಂದುಬಿಡು, ಐನೂರು ಹೆಚ್ಚು ತಗೋ ಅಂದಿದ್ದರು. ಅದಾದ ಮಾರನೆಯ ದಿನ ಬೆಳಿಗ್ಗೆ ಪದ್ದಿ ಅಲ್ಲಿ ಹಾಜರಾಗಿದ್ದಳು.

ಮಗುವನ್ನ ಬಚ್ಚಲ ಮನೆಗೆ ಎತ್ತಿಕೊಂಡು ಹೋಗಿ ತೊಡೆ ಮೇಲೆ ಕೂರಿಸಿಕೊಂಡು ಮೈಗೆಲ್ಲಾ ಎಣ್ಣೆ ಹಚ್ಚಿದಳು. ಬಿಸಿ ಬಿಸಿ ನೀರನ್ನ ಸ್ವಲ್ಪ ಸ್ವಲ್ಪವೇ ಸುರಿದು, ಕೈ ಕಾಲನ್ನ ತೀಡಿದಳು. ಮಗು ಜೋರಾಗಿ ಅಳುತ್ತಿತ್ತು. ಅಳು ಕೇಳಿಸಿಕೊಳ್ಳದಂತೆ ಪದ್ದಿ ಸ್ನಾನ ಮಾಡಿಸುವುದರಲ್ಲಿ ನಿರತಳಾಗಿದ್ದಳು. ಸ್ನಾನವಾದ ನಂತರ ಒಪ್ಪವಾಗಿ ಒರೆಸಿ,  ಪೌಡರ್ ಹಚ್ಚಿ ತೊಟ್ಟಿಲಲ್ಲಿ ಮಲಗಿಸಿ ಕೆಳಗಡೆಯಿಂದ ಸಣ್ಣಗೆ ಧೂಪ ಹಚ್ಚಿದಳು. ಮಗು ಪ್ರಶಾಂತವಾಗಿ ನಿದ್ದೆ ಮಾಡಿತ್ತು. ಅದಾದ ಮೇಲೆ ನಾಲ್ಕು ತಿಂಗಳು ಇದು ಅವಳಿಗೆ ನಿತ್ಯ ದಿನಚರಿ. ಆ ಹೊತ್ತಿಗೆ ಪದ್ದಿ ಗರ್ಬಿಣಿ. ಇಲ್ಲಿನ್ನು ಕೆಲಸಕ್ಕೆ ಬರಲಾರೆ ಅಂದ ದಿನ ಶಾರದಮ್ಮ ಅವಳಿಗೊಂದು ಸೀರೆ, ಖರ್ಚಿಗೆಂದು ಮೂರೂ ಸಾವಿರ ಕೊಟ್ಟಿದ್ದರು. ಪದ್ದಿ ಒಂದೇ ಸಲಕ್ಕೆ ಅಷ್ಟು ದುಡ್ಡು ಅವಳ ಕೈಯಲ್ಲಿ ನೋಡಿದ್ದು ಅವತ್ತೇ. ಶ್ರೀನಿವಾಸರಾಯರಿಗೆ, ಶಾರದಮ್ಮನಿಗೆ ಕೈ ಮುಗಿದು ಪ್ರಶಾಂತನನ್ನೊಮ್ಮೆ ನೋಡಿ ಕಣ್ತುಂಬಿಕೊಂಡಳು. ಪ್ರಶಾಂತ ಮುಗ್ದ ನಗೆ ನಕ್ಕಿದ್ದ. ಅವನಿಗೊಂದು ಮುತ್ತು ಕೊಟ್ಟು ಹೊರಟಿದ್ದಳು ಅಲ್ಲಿಂದ. ಆಮೇಲೆ ಪ್ರಶಾಂತ ದೊಡ್ದವನಾಗುತ್ತಿದ್ದಂತೆ ಅವನ ದುಂಡು ಮುಖ ನೋಡಿ ಬೀಗುತ್ತಿದ್ದಳು. ಅವನು ಸಣ್ಣವನಿದ್ದಾಗ ಅವನ ತಲೆ ತೀಡಿದ್ದರಿಂದಲೇ ಇಷ್ಟು ಚಂದ ಕಾಣುತ್ತಿದ್ದಾನೆಂದು ಅವಳ ಬಲವಾದ ನಂಬಿಕೆ. ಪ್ರಶಾಂತ ಮಾತ್ರ ಇವಳನ್ನ ಕಂಡೊಡನೆ ನಾಚಿಕೆಯಿಂದ ದೂರ ಓಡುತ್ತಿದ್ದ.

ಇನ್ನೂ ಪ್ರಶಾಂತನನ್ನ ನೋಡುತ್ತಾ ಏನೂ ತೋಚದವಳಂತೆ ನಿಂತಿದ್ದ ಪದ್ದಿಗೆ ಮತ್ತೊಮ್ಮೆ ಜೋರಾಗಿ ಆರ್ಡರ್ ಹೇಳಿದ್ದ. 'ಎರಡು ಕ್ವಾರ್ಟರ್ xxx ರಮ್' ಅಂತ. ಒಂದಿಪ್ಪತ್ತು ವರ್ಷ ಹಿಂದೆ ಸಮಯ ಪ್ರಯಾಣ ಮಾಡಿ ಮತ್ತೆ ವರ್ತಮಾನಕ್ಕಿಳಿದ ಪದ್ದಿ, 'ಖಾಲಿಯಾಗಿದೆ' ಅಂತಷ್ಟೇ ಹೇಳಿ ಮುಖ ತಿರುಗಿಸಿದಳು. ಅಲ್ಲೇ ಇದ್ದ ಬಾಟಲಿ ತೋರಿಸಿ, 'ಅದೇನದು' ಅಂದ. 'ಅದು ನಿನ್ನಂತವರಿಗೆ ನಶೆ ಹತ್ಸೋದಕ್ಕಲ್ಲ, ಸುಮ್ಮನೆ ಹೊರಡು, ಇಲ್ಲಾಂದ್ರೆ ನಿಮ್ಮಪ್ಪನಿಗೆ ಹೇಳ್ತೆ' ಅಂದ ಪದ್ದಿ ಅವನನ್ನೊಮ್ಮೆ ದುರುಗುಟ್ಟಿ ನೋಡಿದಳು. ಗೆಳೆಯರ ಮುಂದೆ ಅವನಿಗೆ ಅವಮಾನವಾದಂತೆನಿಸಿ 'ಇಟ್ಕೊಂಡಿರದು ಹೆಂಡದಂಗಡಿ, ಮಾಡ್ತಾ ಇರೋದು ಉಪದೇಶ.. ಸರಿ ಹೋಯ್ತು ' ಅಂತ ಹೇಳಿ ಅಲ್ಲಿಂದ ತಕ್ಷಣ ಹೊರಟ. ಪದ್ದಿ ಕಣ್ಣಂಚಲ್ಲಿದ್ದ ನೀರು ಕುರುಡು ಬೆಳಕಿನಲ್ಲಿ ನಶೆ ಹತ್ತಿದ್ದವರ ಕಣ್ಣಿಗೆ ಕಾಣಲಿಲ್ಲ.

ತಕ್ಷಣವೇ ಹೋಗಿ ಶ್ರೀನಿವಾಸರಾಯರಿಗೆ ಸುದ್ದಿ ತಿಳಿಸಿಬಿಡಲಾ, ಅಂದುಕೊಂಡಳು. ರಾಯರು, ಶಾರದಮ್ಮ ಇಬ್ಬರೂ ನನ್ನ ಕಂಡರೆ ಮುಖ ತಿರುಗಿಸುತ್ತಾರೆ. ಹೆಂಡದಂಗಡಿಯ ಪದ್ದಿ ಜೊತೆ ಅವರಿಗೇನು ಮಾತು. ಮೊದಲು ಕಂಡಾಗೆಲ್ಲಾ ಚೆನ್ನಾಗಿ ಮಾತಾಡಿಸುತ್ತಿದ್ದ ಅವರು, ನನ್ನ ಮಗಳು ಓಡಿ ಹೋದಮೇಲಿಂದ ಎಷ್ಟು ಬೇಕೋ ಅಷ್ಟೇ ಮಾತು. ಆಮೇಲೆ ನಾನು ಹೆಂಡದಂಗಡಿ ನಡೆಸುತ್ತಿದ್ದೇನೆ ಅಂತ ಗೊತ್ತಾದ ಮೇಲಂತೂ ಎದುರಿಗೆ ಕಂಡರೂ ಕಾಣದಂತೆ ಹೋಗಿದ್ದಾರೆ ಎಷ್ಟೋ ಸಲ. ಈಗ ಹೋಗಿ ನಿಮ್ಮ ಮಗ ನನ್ನಂಗಡಿಗೆ ಬಂದಿದ್ದ ಅಂತ ಯಾವ ಮುಖ ಇಟ್ಟುಕೊಂಡು ಹೇಳಲಿ, ಅಷ್ಟಕ್ಕೂ ಅವನು ಹೇಳಿದ್ದರಲ್ಲಿ ತಪ್ಪೇನಿಲ್ಲ, ನಾನ್ಯಾರು ಉಪದೇಶ ಕೊಡೋದಕ್ಕೆ. ಅವನೊಬ್ಬ ಗಿರಾಕಿ, ಸುಮ್ಮನಿರುವ ಬದಲು ನಾನ್ಯಾಕೆ ಹಾಗೇ ಹೇಳಿದೆ. ಪದ್ದಿಯ ಯೋಚನಾ ಲಹರಿ ನಿಂತಿರಲಿಲ್ಲ. ಅವನು ನಾನು ಬೆಳೆಸಿದ ಹುಡುಗ, ನಾಲ್ಕೇ ತಿಂಗಳಾದರೇನು, ಅವನನ್ನ ಅಕ್ಕರೆಯಿಂದ ನೋಡಿಕೊಳ್ಳುವಾಗ ನನ್ನ ಮಗಳಿನ್ನೂ ಹುಟ್ಟಿರಲಿಲ್ಲ. ನಾನು ನೋಡಿಕೊಂಡ ಮೊದಲನೇ ಮಗು ಅದು. ಅಷ್ಟಲ್ಲದೇ ರಾಯರು ಮತ್ತು ಶಾರದಮ್ಮ ಇದನ್ನ ಖಂಡಿತ ಸಹಿಸುವುದಿಲ್ಲ. ರಾಯರ ಮನೆ ಊಟ ಮಾಡಿದ ನನಗೆ, ದಾರಿ ತಪ್ಪುತ್ತಿರೋ ಅವರ ಮಗನನ್ನ ಸರಿದಾರಿಗೆ ತರುವಂತೆ ಮಾಡುವುದು ನನ್ನ ಕರ್ತವ್ಯ, ಅವರಿಗೆ ಹೇಳದಿದ್ದರೆ ಅದು ತಪ್ಪು. ಹೀಗೆ ಯೋಚನೆಗಳು ದ್ವಂದ್ವದೊಳಗೆ ಅತ್ತಿಂದಿತ್ತ ಇತ್ತಿಂದತ್ತ ಹೊರಳಾಡುತಿತ್ತು. ಸರಿ ತಪ್ಪು ಯಾವುದೆಂದು ಸರಿ ನಿರ್ಧಾರಕ್ಕೆ ಬರಲಾಗದಿದ್ದರೂ ರಾಯರಿಗೆ ವಿಚಾರ ತಿಳಿಸುವುದೇ ಹೆಚ್ಚು ಸರಿ ಇರಬಹುದೆಂದು ನಿರ್ಧರಿಸಿದಳು ಪದ್ದಿ.

ಆ ರಾತ್ರಿಯಿಡೀ ಅವಳಿಗೆ ನಿದ್ದೆ ಬರಲಿಲ್ಲ. ಬೆಳಕು ಹರಿಯುವುದಕ್ಕೂ ಮುಂಚೆಯೇ ಎದ್ದು ಮನೆಯಂಗಳದಲ್ಲಿ ಬಂದು ಕೂತಳು.
ಹಳದಿ ದಾಸವಾಳದ ಮೊಗ್ಗು ಸಮಯ ಕಳೆದಂತೆ ಬಿರಿಯುತ್ತಾ ಹೋದಂತೆ ಶ್ರೀನಿವಾಸರಾಯರಿಗೆ ವಿಷಯ ತಿಳಿಸುವ ನಿರ್ಧಾರವೂ ಗಟ್ಟಿಯಾಗತೊಡಗಿತು.

ಅಪರೂಪಕ್ಕೆ ಮನೆಯ ಕಡೆ ಬಂದ ಪದ್ದಿಯನ್ನ ನೋಡಿ ಶಾರದಮ್ಮನಿಗೆ ಆಶ್ಚರ್ಯವಾದರೂ ಹೊರಗಡೆ ತೋರಿಸಿಕೊಳ್ಳಲಿಲ್ಲ. 'ಆರಾಮಾ ಶಾರದಮ್ಮಾ... ' ಅಂತ ಪದ್ದಿ ಕೇಳುತ್ತಿದ್ದಂತೆಯೇ 'ಏನೇ ಪದ್ದಿ, ಸುಮಾರು ದಿನ ಆದ್ಮೇಲೆ ಮನೆ ಕಡೆ ಬಂದಿದಿಯ... ಹೆಂಡದಂಗಡಿ ಇಟ್ತಿದಿಯನ್ತಲ್ಲೇ, ಬೇರೆ ಯಾವುದಾದ್ರು ಕೆಲಸ ಮಾಡೊದಲ್ವಾ, ಅದೇ ಬೇಕಿತ್ತಾ, ಇಡೀ ಊರು ನಿನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾ ಇದೆ'  ಅಂತ ಹೇಳಿ ಮುಗಿಸಿದ್ದಳು. ಹಳೆಯದನ್ನ ವಿವರಿಸೋ ತಾಳ್ಮೆ ಅವಳಿಗಿರಲಿಲ್ಲ. ನಿನ್ನೆ ನಡೆದಿದ್ದನ್ನ ವಿವರಿಸೋಕೆ ಧೈರ್ಯ ಸಾಲಲಿಲ್ಲ. ' ಏನು ಮಾಡದಮ್ಮಾ .. ಹೊಟ್ಟೆ ಪಾಡು ' ಅಂತಷ್ಟೇ ಹೇಳಿ ಅಲ್ಲಿಂದ ತಕ್ಷಣ ಹೊರಟಳು. ಅಚಾನಕ್ಕಾಗಿ ತಿರುಗಿ ಹೋರಾಟ ಪದ್ದಿಯ ಬೆನ್ನಿಗೆ 'ಊರ ಜನಾನ ಹಾಳು ಮಾಡೋಕೆ ಇವಳೊಬ್ಬಳೆ ಸಾಕು' ಅಂತ ಮಾತು ಬಂದಿತ್ತು. ಪದ್ದಿ ನಡಿಗೆಯ ವೇಗ ಜಾಸ್ತಿ ಮಾಡಿಕೊಂಡಳು. ಮತ್ಯಾವುದೇ ಮಾತು ಕೇಳದಿರಲೆಂದು.

ಮತ್ತೆ ಸಂಜೆ ಪ್ರಶಾಂತ ಅವಳಂಗಡಿಗೆ ಬಂದಿದ್ದ. ಹೊಸ ಗುಂಪಿನ ಜೊತೆ. ರಮ್ಮಿನ ಆರ್ಡರ್ ಗೆ ಪದ್ದಿ ಇಲ್ಲವೆಂದಳು . ಅವನ ಗೆಳೆಯನೊಬ್ಬ ಅಲ್ಲಿದ್ದ ಬಾಟಲಿ ಒಂದನ್ನ ಒಡೆದ. ಇನ್ನೊಬ್ಬ ಅಲ್ಲಿದ್ದ ಬೆಂಚನ್ನ ಎತ್ತಿ ಹಾಕಿದ. ಅವನಿಗೊಮ್ಮೆ ಕಪಾಳಕ್ಕೆ ಬಿಗಿಯಬೇಕೆನ್ನುವಷ್ಟು ಕೋಪ ಬಂದಿತ್ತು ಅವಳಿಗೆ. ಅವಳು ಅವತ್ತು ಅವನಿಗೆ ಹೊಡೆಯದಂತೆ ತಡೆದಿದ್ದೆಂದರೆ ಅವನು ಮಗುವಾಗಿದ್ದಾಗ ಅವಳ ತೊಡೆಯ ಮೇಲೆ ಮಲಗಿ ನಿದ್ದೆ ಹೋಗಿದ್ದ ಅವನ ಅಮಾಯಕ ಮುಖ. ಗೆಳೆಯರ ಧಾಂದಲೆ ನೋಡಿ ವಿಕೃತ ನಗೆ ನಕ್ಕಿದ್ದ. ಸತ್ಯಣ್ಣನಿಗೆ ಫೋನು ಮಾಡಲು ತಡೆದಿದ್ದು ಅವಳ ಮನಸ್ಸಲ್ಲಿ ಅಚ್ಚೊತ್ತಿದ್ದ ಅವನ ಮುಗ್ದ ಬೊಚ್ಚ ಬಾಯಿ ನಗು. ಅವಳು ಮತ್ತೆ ಉಪದೇಶ ಕೊಡುವ ಉಸಾಬರಿಗೆ ಹೋಗಲಿಲ್ಲ. ಅಲ್ಲಿಂದ ಸುಮ್ಮನೆ ಹೊರಗೆ ನಡೆದಳು. ಸೀನ ರಮ್ಮಿನ ಬಾಟಲಿ ತಂದಿಟ್ಟ. ಅವಳು ಮತ್ತೆ ಕತ್ತಲಲ್ಲಿ ಕರಗಿದಳು. ಅಂಗಡಿಯ ಕಡೆ ಮತ್ತೆ ಮುಖ ಮಾಡಲಿಲ್ಲ.

ಒಂದೇ ಹೊರಬಾಗಿಲಿನ ಸುರಂಗದೊಳಗಿನ ಕತ್ತಲಲ್ಲಿ, ಸರಿ ದಾರಿ ಹುಡುಕುವ ಗೊಂದಲದಲ್ಲಿದ್ದವಳಿಗೆ ಅಚಾನಕ್ಕಾಗಿ ದೂರದಲ್ಲೆಲ್ಲೋ ಬೆಳಕು ಕಂಡಿತ್ತು. ಅಂಗಡಿಯ ಹಿಂಬದಿಯ ಕತ್ತಲಲ್ಲಿ ಒಬ್ಬಳೇ ಬಿಕ್ಕಳಿಸುತ್ತಿದ್ದ ಅವಳಿಗೆ ಫೋನ್ ಬಂದಿತ್ತು. ಸತ್ಯಣ್ಣನಲ್ಲದೆ ಬೇರೆ ಯಾರ ಫೋನು ಬಂದಿದ್ದಿಲ್ಲ ಇಷ್ಟು ದಿನ. ಈಗ ಬೇರೆ ನಂಬರ್ ನಿಂದ ಫೋನ್ ಬಂದಿತ್ತು. ಹೆದರಿಸಲು ಯಾರೋ ಕರೆ ಮಾಡಿರಬಹುದೆಂದು ಅಂದಾಜು ಮಾಡುತ್ತಿದ್ದ ಅವಳಿಗೆ ಆಕಡೆಯಿಂದ ಬಂದಿದ್ದು 'ಆಯೀ...' ಅನ್ನೋ ಧ್ವನಿ. ವರ್ಷಗಳ ನಂತರ ಕೇಳಿದ ಮಗಳ ದ್ವನಿ ಹೆಂಡದಂಗಡಿಯ ಆಚೆಗಿನ ಪ್ರಪಂಚದ ತೆರೆ ಸರಿಸಿತ್ತು. ಉಭಯ ಕುಶಲೋಪರಿಯ ನಂತರ ಅವಳು ಹೇಳಿದ ವಿಚಾರ ತನ್ನ ಬದುಕು  ಮತ್ತೆ ಸರಿದಾರಿಗೆ ಬರುತ್ತದೆಯೆಂಬ ಭರವಸೆ ಕೊಟ್ಟಿತು.  ಮಗಳು ನಾಳೆ ಮನೆಯಲ್ಲಿರುತ್ತಾಳೆ ಗಂಡನ ಜೊತೆ, ಅವಳಿಗೀಗ ಏಳು ತಿಂಗಳು, ಇನ್ನೆರಡು ತಿಂಗಳಲ್ಲಿ ತನಗೊಬ್ಬ ಮೊಮ್ಮಗ ಬರಲಿದ್ದಾನೆಂಬ ಸುದ್ದಿ ಯಾರಿಗಾದರೂ ಹೇಳಿಕೊಳ್ಳಬೇಕೆನಿಸಿತು. ಯಾರಿಗೆಂದು ಗೊತ್ತಾಗಲಿಲ್ಲ. ಆ ಖುಷಿಯಲ್ಲಿ ಪ್ರಶಾಂತ ಮತ್ತವನ ಗೆಳೆಯರ ಪುಂಡಾಟಿಕೆ, ಶಾರದಮ್ಮ ಬೆನ್ನ ಹಿಂದೆ ಆಡಿದ ಮಾತು, ಹೆಂಡದಂಗಡಿಯ ಕತ್ತಲಲ್ಲಿ ವಾರೆನೋಟದಲ್ಲಿ ನೋಡುವ , ಅಸಹ್ಯ ಬೈಗುಳ ಬಯ್ಯುವ ಜನ ಎಲ್ಲಾ ಒಂದೇ ಸಲಕ್ಕೆ ಅವಳ ಲೋಕದಿಂದ ಮರೆಯಾಗಿದ್ದರು.

ಮಾರನೆಯ ದಿನ ಸಂಜೆ ಆರಕ್ಕೆ ಪದ್ದಿಯ ಅಂಗಡಿ ಬಾಗಿಲು ತೆರೆಯದಿರುವುದನ್ನ ನೋಡಿ ಸತ್ಯಣ್ಣ ಅವಳಿಗೆ ಫೋನ್ ಮಾಡಿದ. ಇನ್ಮುಂದೆ ತಾನು ಅಂಗಡಿಗೆ ಬರುವುದಿಲ್ಲವಾಗಿ ಹೇಳಿದಳು. ವರ್ಷಗಳ ನಂತರ ಆ ಮನೆಯಲ್ಲಿ ಸಂಜೆಯ ಹೊತ್ತಿಗೆ ಬಲ್ಬಿನ ಬೆಳಕು ಹತ್ತಿಕೊಂಡಿತ್ತು. ಪ್ರತಿ ದಿನದಂತೆ ಚಕ್ಕಲಿ ಕೊಡುಬಳೆಯ ಬದಲು ಮೊದಲ ಬಾರಿಗೆ ಬರಲಿರುವ ಮಗಳು ಅಳಿಯನಿಗೆ ರವೆ ಉಂಡೆ ಮಾಡಿದಳು. ಅಂಗಳದ ಹೊರಗಿನ ಖಾಲಿ ಸೈಟಿನಲ್ಲಿ ಹುಡುಗರ ಗುಂಪಿನ ಕ್ರಿಕೆಟ್ ನಡೆಯುತ್ತಿತ್ತು. ದಿನವೂ ಹೆಂಡದಂಗಡಿಯ ಗಲಾಟೆ ಕೇಳಿ ಕೇಳಿ ಅಭ್ಯಾಸವಾಗಿದ್ದ ಅವಳಿಗೆ ಹುಡುಗರ ಆಟದ ಜಗಳ ಮಜವೆನಿಸಿತು. ಮನೆಯೊಳಗಡೆ ಸಣ್ಣಗೆ ಧೂಪ ಹಚ್ಚಿದಳು. ದಿನವೂ ಬರುತ್ತಿದ್ದ ಹೆಂಡದ ವಾಸನೆಯ ಎದುರು ಧೂಪದ ಘಮ ಸುಖವೆನಿಸಿತು. ಬರಲಿರುವ ಮೊಮ್ಮಗನನ್ನ, ಅವನಿಗೋಸ್ಕರ ಮತ್ತೆ ಶುರುವಾಗಲಿರುವ ಮೀಸುವ ಕೆಲಸ ನೆನೆದು ಸಂಭ್ರಮಿಸಿದಳು. ಮಗಳನ್ನ ನೋಡದೆ ಎರಡು ವರ್ಷ. ಹೆಂಡದಂಗಡಿಯ ಕೆಲಸ ಮಾಡುತ್ತಾ ಎರಡು ವರ್ಷ. ಎರಡು ವರ್ಷಗಳ ಅಜ್ಞಾತ ವಾಸಕ್ಕೊಂದು ಅಂತ್ಯ ಹೇಳುವ ಸಮಯ ಮನಸ್ಸಿಗೆ ಸಂಪೂರ್ಣವಾಗಿ ನೆಮ್ಮದಿ ಕೊಟ್ಟಿತ್ತು.

ಮಾರನೆಯ ದಿನ ಅರಳಿದ ಹಳದಿ ದಾಸವಾಳ ಪದ್ದಿಯ ಮಗಳಿಗೆ ಸ್ವಾಗತ ಹೇಳಿತ್ತು. ಆ ದಿನ ಸಂಜೆ ಪದ್ದಿಯಂಗಡಿಯ ಕೌಂಟರ್ ನ ಝೀರೋ ಕ್ಯಾಂಡಲ್ ಬಲ್ಬಿನ ಅಡಿಯಲ್ಲಿ ಅವಳ ಸೀರೆಯ ಹೊಳಪಿರಲಿಲ್ಲ. ಮಗಳನ್ನ ಕಂಡ ಖುಷಿಯಲ್ಲಿ ಪದ್ದಿಯ ಮುಖ ಅರಳಿತ್ತು.




ಸೆಪ್ಟೆಂಬರ್ 14, 2013

ನೀಲಿ ನಕ್ಷತ್ರ




[ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾದ ಕಥೆ - ೨ ಮೇ ೨೦೧೩]


ಬೆಳಗಿನ ಜಾವ ಬೀದಿ ದೀಪಗಳು ಸೂರ್ಯನ ಜೊತೆ ಸುಖಾಸುಮ್ಮನೆ ಜಟಾಪಟಿಗೆ ಇಳಿದಿದ್ದರೆ, ಇತ್ತ ರಮಾಕಾಂತನ ಅಲಾರ್ಮ್ ಇಡೀ ವಠಾರಕ್ಕೆ ಕೇಳಿಸುವಂತೆ ಕೂಗಿಕೊಂಡಿತ್ತು. ಅವನ ಮನೆಯ ಗೋಡೆಗೆ ತಾಕಿಕೊಂಡಿರುವ ಪಕ್ಕದ ಮನೆಯ ಜೋರು ಬಾಯಿಯ ಹೆಂಗಸು  ಶಾಂತಮ್ಮ 'ಪ್ರಳಯ ಆದ್ರೂ ಇವನ ಅಲಾರ್ಮ್ ಮಾತ್ರ ದಿನಾ ಹೊಡೆದುಕೊಳ್ಳೋದು ನಿಲ್ಲಲ್ಲ.. ಥೂ ಇವನ..." ಅಂತ ಬೆಳ್ಳಂಬೆಳಗ್ಗೆ ಸುಪ್ರಭಾತ ಹಾಡಿದ್ದಳು. ಮನಸ್ಸಿಲ್ಲದ ಮನಸ್ಸಲ್ಲಿ ಎದ್ದು, ಅಲಾರ್ಮ್ ಆಫ್ ಮಾಡಿ ಬಿ ಕಾಮ್ ಓದುತ್ತಿರುವ ಮಗ ಇವತ್ತಾದರೂ ಬೇಗ ಎದ್ದು ಓದಬಹುದೆಂಬ ಆಶಾವಾದದಿಂದ ಅವನನ್ನ ಎಬ್ಬಿಸಿದ. 'ಹತ್ತು ನಿಮಿಷ ಇರು.. ಎದ್ದೆಳ್ತಿನಿ.. ಕಿರುಚಿಕೊಬೇಡ... ' ಅಂತ ಮಗ ಕಿರುಚಿ ಮತ್ತೆ ಮಲಗಿದ. ಅಪ್ಪನೆದುರು ರೇಗುವುದು ತನ್ನ ಆಜನ್ಮ ಸಿದ್ಧ ಹಕ್ಕು ಎಂಬಂತೆ ರಮಾಕಾಂತ ಏನು ಮಾತಾಡಿದರೂ ಗಟ್ಟಿ ದನಿಯಲ್ಲಿ ಉತ್ತರಿಸುವುದು ಅವನ ಅಭ್ಯಾಸವಾಗಿತ್ತು. ಇನ್ನೊಮ್ಮೆ ಮಗನೆದುರು ಏನಾದರು ಕೇಳಬೇಕೆಂದರೆ ಎಲ್ಲಿ ತನ್ನ ಮೇಲೆ ರೇಗುತ್ತಾನೋ  ಎಂದು ಯಾವುದನ್ನೂ ಎರಡನೇ ಬಾರಿ ಅವನ ಬಳಿ ಹೇಳುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಹತ್ತು ನಿಮಿಷವಾದ ಬಳಿಕವೂ ಮಗ ಎದ್ದೇಳುವ ಯಾವ ಸೂಚನೆಯೂ ಕಾಣದಾದಾಗ ಮತ್ತೆ ಅವನನ್ನ ಎಬ್ಬಿಸಬೇಕೆನಿಸಲಿಲ್ಲ. ಅಥವಾ ಧೈರ್ಯ ಸಾಲಲಿಲ್ಲ.  

ನಿನ್ನೆ ಮಾಡಿದ ಚಿತ್ರಾನ್ನವನ್ನ ಡಬ್ಬಕ್ಕೆ ಹಾಕಿಕೊಂಡು ಮಗನಿಗೊಂದಿಷ್ಟು ಇಟ್ಟ, ಈ ಚಳಿಯಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ, ಬಂದು ಮಾಡಿದರಾಯ್ತು ಎಂದು ತನಗೆ ತಾನೇ ನೆಪ ಹೇಳಿಕೊಂಡ. ಒಳಗಿನ ಕೋಣೆಯ ಕಿಟಕಿಗೆ ನೇತು ಹಾಕಿರುವ ಶರ್ಟು ತೊಳೆಯದೇ ೫ ದಿನ  ಆಗಿರುವುದು ನೆನಪಾಯಿತು. ಅದನ್ನೇ ಇನ್ನೊಂದು ದಿನ ಹಾಕಿ ಇವತ್ತು ಸಂಜೆ ಮನೆಗೆ ಬಂದವನೇ ಅದನ್ನ ತೊಳೆದುಹಾಕಬೇಕೆಂದು ನಿರ್ಧರಿಸಿದ. ಪ್ಯಾಂಟು ಮುದ್ದೆಯಾಗಿತ್ತು. ಅದರ ಮೇಲೆ ಕೈಯಿಂದ ಇಸ್ತ್ರಿ  ಮಾಡಿ  ಇವತ್ತಿಗೆ ಇಷ್ಟು  ಸಾಕೆಂಬಂತೆ ತನ್ನ ಸೊಂಟಕ್ಕೆ ನೇತುಹಾಕಿಕೊಂಡ. ಇರುವ ಎರಡು ಸಾಕ್ಸ್ ಜೊತೆ, ಒಂದು ತೊಳೆಯಲು ಹಾಕಿದ್ದು ಅಲ್ಲೇ ಇದೆಯೆಂದು ನೆನಪಾಗಿ ಮತ್ತೊಂದು ಸಾಕ್ಸ್ ವಾಸನೆ ಹೊಡೆಯುತ್ತಿಲ್ಲವೆಂದು ಎರಡು ಬಾರಿ ಮೂಸಿ ನೋಡಿ ಖಚಿತಪಡಿಸಿಕೊಂಡು, 'ರಮೇಶ... ಎದ್ದು ಬಾಗಿಲು ಹಾಕ್ಕೋ... ' ಎಂದು  ಇನ್ನೂ  ಮಲಗಿರುವ ಮಗನಿಗೆ ಹೇಳಿ ವಠಾರ ದಾಟಿ ಮೇನ್ ರೋಡ್ ಗೆ ಬಂದು ಬಸ್ ಗೆ  ಕಾದು ನಿಂತ. 

ಚಳಿಗಾಲದ ಬೆಳಗಿನ ಶಿಫ್ಟ್ ಅವನಿಗಿಷ್ಟ. ಎದ್ದ ಕೂಡಲೇ ಚಳಿ ಎನಿಸಿದರೂ ಏಳು ಎಂಟು ಗಂಟೆಯಾಗುತ್ತಿದಂತೆ, ಸೂರ್ಯ ಕಿರಣಗಳು ತಂಪು ಗಾಳಿಯ ಜೊತೆ ಬೆರೆತು ಮೈಗೆ ಹಿತ ಎನಿಸುತ್ತಿತ್ತು. ರಾತ್ರಿ ಕೊರೆಯುವ ಚಳಿಯಲ್ಲಿ ಕೂರುವುದಕ್ಕಿಂತ ಬೆಳಗಿನ ಚಳಿ ಮಜವೆನಿಸುತ್ತಿತ್ತು.  ಸಮಯಕ್ಕೆ ಸರಿಯಾಗಿ ITPL ಕಡೆ  ಹೋಗುವ ಬಸ್ ಬರುತ್ತಿದ್ದಂತೆ, ತನ್ನ ಇವತ್ತಿನ ದಿನ ಚೆನ್ನಾಗಿದೆಯೆಂದು  ಎಣಿಸಿ ಕಂಪನಿಯ ಒಳಹೊಕ್ಕ. ಎಂದಿನಂತೆ  ಎಲ್ಲಾ ಮಹಡಿಯ, ಎಲ್ಲಾ ಕೋಣೆಯ ಅನವಶ್ಯಕ ದೀಪಗಳನ್ನಾರಿಸಿ ಬೇಸ್‌ಮೆಂಟ್ನಲ್ಲಿ ನಡೆಯುವ ಮೀಟಿಂಗ್ ಗೆ ಬಂದು ಸಾಲಲ್ಲಿ ನಿಂತ. ತನ್ನ ತಿಳಿನೀಲಿ ಯೂನಿಫಾರ್ಮ್ನ ಇನ್ಶರ್ಟ್ ಒಮ್ಮೆ ಸರಿ ಮಾಡಿಕೊಂಡು, ಐ ಡಿ ಕಾರ್ಡ್ ನಲ್ಲಿ ಬರೆದಿದ್ದ 'ರಮಾಕಾಂತ ಗೌಡ.. ಬ್ಲೂ ಸ್ಟಾರ್ ಸೆಕ್ಯೂರಿಟೀ...' ಹೆಸರನ್ನ  ದಿನಚರಿಯಂತೆ ಮತ್ತೊಮ್ಮೆ ಓದಿದ. ತನ್ನ ತಿಳಿ ನೀಲಿಯ ಅಂಗಿಯ ಜೇಬಿನ ಮೇಲಿದ್ದ ಘಾಡ ನೀಲಿ ಬಣ್ಣದ  ನಕ್ಷತ್ರದ ಚಿಹ್ನೆ ಎಂದಿನಂತೆ ಉತ್ಸಾಹ ತುಂಬಿತು. ಅದನ್ನೊಮ್ಮೆ ನೋಡಿ ಸೆಕ್ಯುರಿಟಿ ಕೆಲಸ, ಯಾವುದೇ ಪೋಲೀಸ್ ಕೆಲಸದವನಿಗೂ ತಾನೆನೂ ಕಮ್ಮಿಯಿಲ್ಲ ಅಂದುಕೊಂಡು ಪೂರ್ತಿ ದಿನ ನಿಂತು ಮಾಡಬೇಕಾದ ಕೆಲಸಕ್ಕೆ ಸ್ಪೂರ್ತಿ ತಂದುಕೊಂಡ. 

ಈ ಕಂಪನಿಗೆ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಮೊದಲು ಎ ಟಿ ಎಂ ಒಂದರಲ್ಲಿ ಕೆಲಸ ಮಾಡುತ್ತಿದ್ದ ರಮಾಕಾಂತ. ಎ ಟಿ ಎಂ ಕೆಲಸ ಮೊದಮೊದಲು ಅವನಿಗೆ ವಿಚಿತ್ರ ಅನ್ನಿಸತೊಡಗಿತ್ತು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಮ್ಮನೇ ತನ್ನ ಪಾಡಿಗೆ ತಾನು ಕೂತಿರುತಿದ್ದ. ಜನ ಅವರ ಪಾಡಿಗೆ ಅವರು ದುಡ್ಡು ತೆಗೆದುಕೊಂಡು ಹೋಗುತ್ತಿದ್ದರು. ಪಕ್ಕದಲ್ಲಿದ್ದ ದರ್ಶಿನಿಯಲ್ಲಿ ಹೊತ್ತುಹೊತ್ತಿಗೆ ಚಾ ಕುಡಿಯುವುದು, ದಿನಕ್ಕೆರಡು ಬಾರಿ ಕಸ ಗುಡಿಸುವುದು  ಬಿಟ್ಟರೆ ವಾರದಲ್ಲೆರಡು ದಿನ ಎ ಟಿ ಎಂ ನಲ್ಲಿ ದುಡ್ಡಿಲ್ಲ, ಹಾಳಾಗಿದೆ ಎಂದು ಜನರನ್ನ ವಾಪಸ್ ಕಳಿಸುವುದೇ ಅವನ ಮುಖ್ಯ ಕೆಲಸವಾಗಿತ್ತು. ದುಡ್ಡಿಲ್ಲದ ಸಿಟ್ಟಿಗೆ ಜನ ಬಾಂಕ್ ಗೆ, ಇವನಿಗೆ ಹಿಡಿಶಾಪ ಹಾಕಿ ಗೊಣಗುತ್ತಾ  ಹೋಗುತ್ತಿದ್ದರು. ಹೀಗೆ ಒಂದು ದಿನ ಕಸ ಗುಡಿಸುತ್ತಿದ್ದವ ಅಲ್ಲಿ ಬಿದ್ದಿರುವ ಮಿನಿ ಸ್ಟೇಟ್ಮೆಂಟ್ ಕೈಗೆತ್ತಿಕೊಂಡ. ಸಮಯ ಹೇಗೂ ಕಳೆಯುತ್ತಿರಲಿಲ್ಲ. ಕುತೂಹಲಕ್ಕಾಗಿ ಎಲ್ಲವನ್ನೂ ನೋಡುತ್ತಾ ಹೋದ. ಐನೂರು, ಸಾವಿರ, ನಲವತ್ತು ಸಾವಿರ, ಎರಡು ಸಾವಿರ,  ನಾಲ್ಕು ಲಕ್ಷ ಹೀಗೆ ದುಡ್ಡೇ ಇಲ್ಲದ ಅಕೌಂಟ್ನಿಂದ ಹಿಡಿದು ಲಕ್ಷಗಟ್ಟಲೇ ದುಡ್ಡಿರುವ ಸ್ಲಿಪ್ಗಳು ಕಣ್ಣಿಗೆ ಬೀಳುತ್ತಿತ್ತು. ಏನಾದರೂ ಮಾಡಿ ತಾನೂ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾ ಅಂತ ಆಲೋಚನೆಯಲ್ಲಿ ಮುಳುಗಿಹೋಗಿರುತ್ತಿದ್ದ.

ಒಂದು ದಿನ ಅಚಾನಕ್ಕಾಗಿ ಅದೇ ಏರಿಯಾದಲ್ಲಿದ್ದ ಸಿನಿಮಾ ನಟಿಯೊಬ್ಬಳು  ಅಲ್ಲಿ ದುಡ್ಡು ತೆಗೆಯಲು ಬಂದಾಗ ಅಚ್ಚರಿ ಕಣ್ಣುಗಳಲ್ಲಿ ಅವಳನ್ನ ನೋಡಿದ್ದ. ಅವನಿಗೆ ತಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚಲಿಲ್ಲ.  ಒಂದು ಸಲ್ಯೂಟ್ ಹೊಡೆದು,  'ಮೇಡಂ .. ನಿಮ್ಮನ್ನ ನೋಡಿದ್ದು ನನ್ನ ಅದೃಷ್ಟ ಮೇಡಂ ..' ಎಂದವನೇ ಸೆಕ್ಯೂರಿಟೀ ಹಾಜರಿ ಪುಸ್ತಕದ ಕೊನೆಯ ಹಾಳೆ ತೆಗೆದು 'ಏನಾರ ಒಂದು ಲೈನ್ ಬರೆದು, ಆಟೋಗ್ರಾಫ್ ಹಾಕಿ ಮೇಡಂ.."  ಎಂದು ಹೇಳಿ ಅವಳ ಮುಂದಿಟ್ಟಿದ್ದ. ಆ ನಟಿಮಣಿ ಅಲ್ಲೊಂದು ಗೆರೆ ಗೀಚಿ ಸಾಕೆನಪ್ಪ ಇಷ್ಟು ಉದ್ದದ ಲೈನ್ ಅಂತ ಹೇಳಿ ನಕ್ಕಿದ್ದಳು. "ಮೇಡಂ .. ತಮಾಷಿ ಮಾಡಬ್ಯಾಡಿ  ಒಂದು ಸಾಲು.. ಏನಾರ ಬರೀರಿ..  "  ಅಂತ ಅಂಗಲಾಚಿದ್ದ. ಕೊನೆಗೂ 'ಒಲವು..' ಅವಳ ಮೊದಲ ಸಿನೆಮಾದ ಹೆಸರನ್ನಷ್ಟೇ ಬರೆದು ಸಹಿ ಹಾಕಿದ್ದಳು ಆ ಸಿನೆಮಾ ನಟಿ.  ಅವಳನ್ನ ಭೇಟಿಯಾಗಿದ್ದು  ಅವನಿಗೆ ಹೇಳತೀರದ ಸಂಭ್ರಮವಾಗಿತ್ತು. ಅದರಲ್ಲೂ ಏನೋ 'ಲವ್ವು' ಅಂತ ಬರೆದಿರುವುದು  ಓದಿ ಅವತ್ತು ಅವನಿಗೆ ವಿಚಿತ್ರ ಸಂಭ್ರಮ. ಮನೆಗೆ ಹೋಗಿ ತನ್ನ ಮಗನಿಗೆ, ವಠಾರದವರಿಗೆ ಇದನ್ನ ವಿವರಿಸುವ ತನಕ ವಿರಮಿಸುವ ವ್ಯವಧಾನವಿರಲಿಲ್ಲ. ಕೊಂಚ ಹೊತ್ತು ಆಕಾಶದಲ್ಲಿ ತೇಲಾಡಿ ಭೂಮಿಗೆ ಮರಳಿದವನೇ ಅವಳ  ಅಕೌಂಚ್ನಲಿ ಎಷ್ಟು ದುಡ್ಡಿರಬಹುದು ಎಂಬ ಕುತೂಹಲ ತಡೆಯದಾದ. ಅವನನ್ನು ನೋಡಿದ ಸಂಭ್ರಮದಲ್ಲಿ ಮಿನಿ ಸ್ಟೇಟ್ಮೆಂಟ್ ಅಲ್ಲೇ ಎಸೆದಳೋ, ಹರಿದು ಹಾಕಿದಳೋ  ತಿಳಿಯದೇ ಅದರ ಹುಡುಕಾಟಕ್ಕೆ ಬಿದ್ದಿದ್ದ. ಕೊನೆಗೂ ಅದ್ಯಾವುದೆಂದು ಗೊತ್ತಾಗದೇ, ಇಪ್ಪತ್ತು ಲಕ್ಷ ಇದ್ದ ಒಂದು ಸ್ಲಿಪ್ ನೋಡಿ ಅದೇ ಅವಳದಿರಬೆಕೆನ್ದು ಊಹಿಸಿ  ಆ ಸಿನಿಮಾ ನಟಿಯ  ಬಳಿ ಎಷ್ಟು ದುಡ್ಡಿದೆ ಎಂಬುದು ತನಗೆ ಗೊತ್ತಿದೆ ಎಂದು ಸಿಕ್ಕಿದವರ ಮುಂದೆ ಕೊಚ್ಚಿಕೊಳ್ಳತೊಡಗಿದ. ತನ್ನ ಐದು ಸಾವಿರ ಸಂಬಳ ಎಷ್ಟು ವರ್ಷ ದುಡಿದರೆ ಇಷ್ಟಾಗಬಹುದೆಂದು ಲೆಕ್ಕ ಹಾಕಿ ತನ್ನ ಸ್ಥಿತಿಗೆ ಮರುಗುತ್ತಿದ್ದ. 

ಕೊನೆಕೊನೆಗೆ ಈ ಸ್ಟೇಟ್ಮೆಂಟ್  ನೋಡುವ ಅವನ ಖಯಾಲಿ  ಎಲ್ಲಿ ತನಕ ಬಂತೆಂದರೆ, ಯಾರಾದರೂ ಬರುತ್ತಿದ್ದಂತೆ ಅವರ ಚಹರೆ, ಡ್ರೆಸ್ಸು, ಸ್ಟೈಲು ನೋಡಿ ಅವರು ಎಷ್ಟು ದುಡ್ಡಿಟ್ಟಿರಬಹುದೆಂದು ಊಹೆ ಮಾಡುತ್ತಿದ್ದ. ಅವರು ಹೋಗುತ್ತಿದ್ದಂತೆ, ಡಸ್ಟ್‌ಬಿನ್ನಿಂದ ತೆಗೆದ ಸ್ಲಿಪ್ ನೋಡಿ, ತನ್ನ ಊಹೆ ಸರಿಯಿದ್ದರೆ ಮನಸಲ್ಲೇ ಬೀಗುತ್ತಿದ್ದ. ಹೀಗೆ  ಬರಬರುತ್ತಾ  ರಾತ್ರಿ ಮಲಗಿದರೆ ಸಾಕು, ದುಡ್ಡಿನ ಕಟ್ಟು ಮನೆಯಲ್ಲಿ ಯಾರೋ ತಂದು ಇಟ್ಟನ್ತೆ, ಎ ಟಿ ಎಂ ಕಳುವು ತಾನೇ ಮಾಡಿದಂತೆ, ಯಾರನ್ನೋ ದೋಚಿದಂತೆ ಕನಸು ಬೀಳಲಾರಂಭಿಸಿದವು. ಬೆಳಿಗ್ಗೆ ಹೊತ್ತಲ್ಲಿ ತಾನು ಕೆಟ್ಟ ಯೋಚನೆ ಮಾಡುತ್ತಿರುವುದರಿಂದಲೇ ಈ ರೀತಿ ಕನಸು ಬೀಳುತ್ತಿದೆ ಎಂದೆನಿಸಿ ತನ್ನ ಯೋಚನೆ ಧಾಟಿಯೇ ಅಸಹ್ಯವೆನಿಸಿ, ಈ ದುಡ್ಡಿನ ಪ್ರಪಂಚದಿಂದ ಹೇಗಾದರೂ ಹೊರಬಂದರೆ ಸಾಕೆಂದು ತನ್ನ ಕೆಲಸದ ಜಾಗ ಬದಲಾಯಿಸಿ ಎಂದು ಸೂಪರ್‌ವೈಸರ್ ಬಳಿ ಗೋಗರೆದಿದ್ದ. ಅಂತೂ ಇಂತೂ ಆರು ತಿಂಗಳಾದ ನಂತರ ಸಾಫ್ಟ್‌ವೇರ್ ಕಂಪನಿಗೆ ಸೆಕ್ಯೂರಿಟೀ ಗಾರ್ಡ್ ಆಗಿ ಅವನಿಗೆ ವರ್ಗವಾಗಿತ್ತು.   

 ಅದಕ್ಕೂ ಮುಂಚೆ ರಮಾಕಾಂತ ಏನು  ಮಾಡುತ್ತಿದ್ದ ಎನ್ನುವುದು ಯಾರಿಗೂ ಸರಿಯಾಗಿ ಗೊತ್ತಿರಲಿಲ್ಲ. ಸಿಕ್ಕಾಪಟ್ಟೆ ಕುಡಿಯುತ್ತಿದ್ದ, ಅವನ ಹೆಂಡತಿ ಅವನ ಕುಡಿತ ತಾಳಲಾರದೆ ಕಂಡಕ್ಟರ್ ಒಬ್ಬನ ಜೊತೆ ಓಡಿ ಹೋದಳು ಅನ್ನೋ ಸುದ್ದಿ ಹಬ್ಬಿತ್ತು. ಯಾರಾದರೂ ಅದರ ಬಗ್ಗೆ ಕೇಳಿದರೆ ಅವನಿಗೆ ವಿಪರೀತ ಸಿಟ್ಟು ಬರುತ್ತಿತ್ತು. ಆದರೆ ಸಿಟ್ಟನ್ನ ತೋರಿಸದೆ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದ. ಇವನ ಮಗನೂ ಇವನೆದುರಿಗೆ ಕುಡಿಯಲು ಪ್ರಾರಂಬಿಸಿದ್ದನಂತೆ. ಅದನ್ನು ನೋಡಿ ಅವಮಾನವಾಗಿ ಮಗನಿಗೂ ಬೈದು ತಾನೂ ಕುಡಿತ ಬಿಟ್ಟು ಈ ಕೆಲಸಕ್ಕೆ ಸೇರಿಕೊಂಡಿದ್ದ ಅನ್ನೋ ಸುದ್ದಿ ಅಲ್ಲಲ್ಲಿ ಹರಿದಾಡುತ್ತಿತ್ತು. ಹೇಗೆ ಬಿಟ್ಟ, ಯಾಕೆ ಬಿಟ್ಟ ಅನ್ನುವ ಬಗ್ಗೆ ವದಂತಿಗಳಿದ್ದರೂ ಅವನು ಕುಡಿತ ಬಿಟ್ಟಿದ್ದು ಮಾತ್ರ ಅವನ ವಠಾರದವರಿಗೆಲ್ಲ ಆಶ್ಚರ್ಯವಾಗಿತ್ತು. ಇದೆಷ್ಟು ದಿನದ ಆಟವೋ  ಇದನ್ನೂ ನೋಡೇಬಿಡೋಣ ಅಂದುಕೊಂಡಿದ್ದರು ಒಂದಿಷ್ಟು ಜನ. ತನ್ನ ಗಂಡನಿಗೂ ಹೀಗೆ ಸಾಕ್ಷಾತ್ಕಾರವಾದಲ್ಲಿ ತನಗೆ ದಿನಾ ಒದೆ ಬೀಳುವುದು ತಪ್ಪಬಹುದು ಅಂತ ಶಾಂತಮ್ಮ ಗಂಡನಿಗೆ ಬೆಳಗೆಲ್ಲಾ ಉಪದೇಶ ಮಾಡುತ್ತಿದ್ದಳು. ಆ ಸಿಟ್ಟಿಗೆ ಅವಳ ಗಂಡ ಮತ್ತೊಂದಿಷ್ಟು ಕುಡಿದು ಬರುತ್ತಿದ್ದ. ಉಪದೇಶ ಕೊಟ್ಟಷ್ಟು ಜಾಸ್ತಿ ಒದೆ ಬೀಳುತ್ತಿತ್ತು.

                      ಬೆಳಗಿನ ಮೀಟಿಂಗ್ ಮುಗಿಯುತ್ತಿದ್ದಂತೆ ಎಲ್ಲರೂ ಅವರವರ ಕೆಲಸದ ಜಾಗಕ್ಕೆ ಹೊರಡಲಾರಂಬಿಸಿದರು.  ಕಂಪನಿಗೆ ಬರುವ ಎಲ್ಲಾ ಕಾರುಗಳ ಕೆಳಗೆ ಕನ್ನಡಿಯಿಟ್ಟು ನೋಡುವುದು, ಡಿಕ್ಕಿ ತೆಗೆದು ಪರೀಕ್ಷಿಸುವುದು, ಪಾರ್ಕಿಂಗ್ ಸ್ಥಳದಲ್ಲಿ ಬೈಕ್, ಕಾರ್ ನಿಲ್ಲಿಸುವವರಿಗೆ ವಿಶಲ್ ಹೊಡೆಯುತ್ತಾ ದಾರಿ ತೋರಿಸುವುದು, ಪ್ರಾಜೆಕ್ಟ್ ನಡೆಯುವ ಮಹಡಿಗಳಲ್ಲಿ ಬಾಗಿಲು ಕಾಯುವುದು ಹೀಗೆ ಒಂದಿಲ್ಲೊಂದು ಕೆಲಸವಹಿಸಲಾಗುತ್ತಿತ್ತು. ಆದರೆ ಅವನಿಗಿಷ್ಟವಾದ ಕೆಲಸವೆಂದರೆ ರಿಸೆಪ್ಷನ್ ಡೆಸ್ಕ್ ನ ಬಳಿ ನಿಂತು ಕೆಲಸಕ್ಕೆ ಬರುವ ಎಲ್ಲರ ಐ ಡಿ ಕಾರ್ಡ್ ಮತ್ತು ಬಾಗ್ ಚೆಕ್ ಮಾಡುವುದು. ಕಾರು ಬೈಕುಗಳಲ್ಲದೇ ಮನುಷ್ಯರು ಅಂತ ಓಡಾಡುವ ಜಾಗ ಅದೊಂದೇ. ಅದಕ್ಕೂ ಮುಖ್ಯವಾದ ಕಾರಣ ಇನ್ನೊಂದಿತ್ತು. ಮೊಣಕಾಲು ತನಕ ಮಾತ್ರ ಮುಚ್ಚುತ್ತಿದ್ದ ಕಪ್ಪು ಸ್ಕರ್ಟ್ ಮೇಲೊಂದು ಬಿಳಿ ಷರ್ಟು ಕಪ್ಪು ಬ್ಲೇಸರ್ ಹಾಕಿ ತಲೆಗೂದಲನ್ನ ಮಟ್ಟಸವಾಗಿ ಬಾಚಿ ರಿಸೆಪ್ಶನ್ ಡೆಸ್ಕ್ನಲ್ಲಿ ಕೂತಿರುತ್ತಿದ್ದ ಮೇರಿ. ಅವಳ ನಸುಗೆಂಪು ಬಣ್ಣ ಅವನನ್ನ ಆಕರ್ಷಿಸುತ್ತಿತ್ತು. ಹಣೆಯ ಮೇಲಿನ ದೊಡ್ಡ ಮಚ್ಚೆಯನ್ನ ತನ್ನ ಕೂದಲಿಂದ ಮುಚ್ಚಿರುತ್ತಿದ್ದಳು. ಅದು ಮಚ್ಚೆಯೋ ಅಥವಾ ಹಾಗೆ ಅಗಲ ಬಿಂದಿ ಹೊಸ ಸ್ಟೈಲೋ ಎಂಬುದು ತಿಳಿಯದೆ ಹತ್ತಿರದಿಂದ ನೋಡಿ ತೀರ್ಮಾನಕ್ಕೆ ಬರಬೇಕೆಂದು ಅವಕಾಶಕ್ಕೆ ಕಾಯುತ್ತಿರುತ್ತಿದ್ದ. ಅವಳು ಬರುವಾಗ ಹೋಗುವಾಗ ಅವಳ ಕಾಲನ್ನೇ ನೋಡುವುದರಲ್ಲಿ ನಿರತನಾಗುತ್ತಿದ್ದ. ಅವಳನ್ನೊಮ್ಮೆ ಹೇಗಾದರೂ ಮಾತಾಡಿಸಬೇಕೆಂದು ದಾರಿ ಹುಡುಕುತ್ತಿರುತ್ತಿದ್ದವನಿಗೆ ಅವತ್ತು  ಐ ಡಿ ಕಾರ್ಡ್ ಮರೆತು ಬಂದ ಎಂಪ್ಲಾಯಿ ಒಬ್ಬನನ್ನ  ಇವಳೆದುರಿಗೆ ಕರೆದುಕೊಂಡು ಬರುವುದು ನೆಪವಾಗಿತ್ತು. ಅವಳನ್ನ  ನೋಡಿ  ಸುಮ್ಮನೇ ಹಲ್ಲು ಕಿರಿದ. ಎಂಪ್ಲಾಯಿ  ಬಳಿ ನಗುತ್ತಾ ಹೆಸರು, ಪ್ರಾಜೆಕ್ಟ್ ಕೇಳಿದ  ಅವಳು ಎಂದಿನಂತೆ ರಮಾಕಾಂತನನ್ನೊಮ್ಮೆ  ದುರುಗುಟ್ಟಿ ನೋಡಿದಳು. ಇವಳ ಅಂದಕ್ಕೂ ದುರುಗುಟ್ಟುವ ನೋಟಕ್ಕೂ ಸಂಬಂದವೇ ಇಲ್ಲವೆಂದು  ಬೈದು ತನ್ನ ಕೆಲಸ ಮುಂದುವರೆಸಿದ.

ಎ ಟಿ ಎಂ ಕೆಲಸ ಬಿಟ್ಟಾಗಿನಿಂದ ರಮಾಕಾಂತನಿಗೆ  ನೆಮ್ಮದಿ ಎನಿಸುತಿತ್ತು. ಸಮಯ ಮೊದಲಿನಷ್ಟು ದಂಡಿಯಾಗಿ ಬಿದ್ದಿರುತ್ತಿರಲಿಲ್ಲ. ಪರಿಣಾಮವಾಗಿ ಕೆಟ್ಟ ಆಲೋಚನೆಗಳು ಮೂಡುತ್ತಿರಲಿಲ್ಲ. ದುಡ್ಡಿನ ಭ್ರಮೆ ತೊಲಗಿ  ಭಯಾನಕ ಕನಸುಗಳು ಬೀಳುವುದು ನಿಂತು ಹೋಗಿತ್ತು. ಆದರೆ ಇತ್ತೀಚಿಗೆ ಅವನಿಗೆ  ಹಗಲುಗನಸೊಂದು ಶುರು ಆಗಿತ್ತು. ಆಫೀಸ್ ಗೆ ಬರುವ ಹೋಗುವವರನ್ನ ನೋಡುತ್ತಾ ತನ್ನ ಮಗನಿಗೂ ಇಲ್ಲೇ ಕೆಲಸ ಸಿಕ್ಕರೆ ಹೇಗಿರುತ್ತೆಂದು ಆಲೋಚಿಸತೊಡಗಿದ್ದ. ಈ ವರ್ಷ ಹೇಗಿದ್ದರೂ ಅವನ ಡಿಗ್ರಿ ಮುಗಿಯುತ್ತದೆ, ಯಾರನ್ನಾದರೂ ಪರಿಚಯ ಮಾಡಿಕೊಂಡು ಅವನಿಗೊಂದು ಕೆಲಸ ಕೊಡಿಸಬೇಕೆಂದು ಅನ್ನಿಸುತ್ತಿದ್ದಾದರೂ ಯಾರನ್ನು ಕೇಳುವುದು ಎಂದು ತೋಚದೆ ಸುಮ್ಮನಾಗುತ್ತಿದ್ದ. ಮಗ ಇಲ್ಲಿ ಶೂ ಟೈ ಹಾಕಿಕೊಂಡು ಓಡಾಡಿದಂತೆಯೂ, ಒಳಗಿನ ಚಂದದ ಕ್ಯೂಬಿಕಲ್ ನಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡಂತೆಯೂ, ಕ್ಯಾಂಟೀನ್ನಲ್ಲಿ ಚಂದದ ಹುಡುಗಿಯರ ಜೊತೆ ಹರಟೆ ಹೊಡೆಯುತ್ತಾ  ಪಿಜ್ಜಾ ತರಿಸಿಕೊಂಡು ತಿಂದಂತೆಯೂ, ತಾನು ಈ ಕೆಲಸ ಬಿಟ್ಟು ಸುಖವಾಗಿ ಮನೆಯಲ್ಲಿ ಕೂತು ನಿವೃತ್ತಿ ಜೀವನ ಸಾಗಿಸಿದಂತೆಯೂ  ಭಾಸವಾಗುತ್ತಿತ್ತು. ಅವನಿಗೆ ಕೆಲಸ ಸಿಗಬೇಕೆಂದು ತಾನು ಬಯಸುತ್ತಿರುವುದು ತನ್ನ ಸ್ವಾರ್ಥವೋ ಅಥವಾ ಮಗನ ಪ್ರೀತಿಗೋ .. ಕೇಳಿಕೊಂಡ ಪ್ರಶ್ನೆಗೆ ಉತ್ತರ ಸಿಗಲಿಲ್ಲ.

ಮಧ್ಯಾಹ್ನ ಆಗುತ್ತಿದ್ದಂತೆ ಒಂದೇ ಸಮನೆ ಮಾಡಿದ್ದೇ ಕೆಲಸ ಮಾಡಿ ಮಾಡಿ ಬೋರಾಗಲಾರಂಭಿಸಿತ್ತು. ಕಂಪನಿಗೆ ಬರುವವರ, ಹೋಗುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಕೆಲಸದ ವೇಳೆಯಲ್ಲಿ ಕೆಲಸವಿಲ್ಲದಿದ್ದರೂ ಕೂರುವ ಹಾಗಿಲ್ಲ. ಅಲ್ಲೇ ಅತ್ತಿಂದಿತ್ತ ಸುತ್ತಾಡುತ್ತಾ ತಾನು ಇನ್ನೆಷ್ಟು ವರ್ಷ ಹೀಗೆ ಹುಚ್ಚು ಕೆಲಸ ಮಾಡುತ್ತಿರಬೇಕೋ ಅಂತ ತನಗೆ ತಾನೇ ಕೇಳಿಕೊಂಡ. ಊಟ ಮಾಡಿ ಆಗ ತಾನೇ ಬಂದು ಕೂತ  ಮೇರಿಯನ್ನ  ಇವತ್ತು ಹೇಗಾದರೂ ಮಾಡಿ ಮಾತಾಡಿಸಬೇಕೆಂದು ನಿರ್ಧರಿಸಿದ. ಅವಳೊಬ್ಬಳೇ ರಿಸೆಪ್ಶನ್ ಡೆಸ್ಕ್ ಬಳಿ ಇರುವುದನ್ನ ನೋಡಿ ಧೈರ್ಯ ಮಾಡಿ ಅವಳಲ್ಲಿಗೆ ಹೋದ. ತನ್ನ ಮಗನ ಕೆಲಸದ  ಬಗ್ಗೆಯೂ ಕೇಳಿದಂತೆ ಆಯಿತು, ಇತ್ತ ಅವಳೊಡನೆ ಮಾತಾಡಿದಂತೆಯೂ ಆಯಿತು ಅನ್ನುವುದು ಇವನ ಲೆಕ್ಕಾಚಾರ. 'ಊಟ ಆಯ್ತಾ ಮೇಡಂ ... ಈ ಕಂಪನೀಲಿ ಕೆಲ್ಸ ಮಾಡಕ್ಕೆ ಏನು ಓದಿರ್ಬೇಕು ಮೇಡಂ' ಅಂತ ಒಂದೇ ಉಸಿರಲ್ಲಿ, ಅವಳು ದುರುಗುಟ್ಟಿ ನೋಡುವುದಕ್ಕೆ ಮುಂಚೆಯೇ ಕೇಳಿ ಮುಗಿಸಿದ. "ಸೆಕ್ಯೂರಿಟೀ ಕೆಲಸ ಮಾಡೋಕೆ ಓದೋಕೆ ಬರಿಯೋಕೆ ಅಷ್ಟು ಬಂದರೆ ಸಾಕು" ಉಡಾಫೆಯಿಂದ ಉತ್ತರಿಸಿ ನಕ್ಕಳು. ಇಷ್ಟು ಹತ್ತಿರದಿಂದ ಅವಳ ನಗುವನ್ನ ಮೊದಲ ಬಾರಿಗೆ ನೋಡಿದ್ದ. ತನ್ನೆದುರಿಗೇ ನಕ್ಕಾಗ ಇನ್ನೂ ಚಂದ ಕಂಡಳಾದರೂ ಮರುಕ್ಷಣ ಅವಮಾನವಾಯಿತೆಂದೆನಿಸಿ ಅವಳ ಮುಖ ಮತ್ತೆ ನೋಡಲಾಗದೇ ವಾಪಸು ಬಂದಿದ್ದ. ಹಣೆಯ ಮೇಲಿನದು ಮಚ್ಚೆಯೋ ಅಥವಾ ಬಿಂದಿಯೋ ಅವನ  ಅನುಮಾನ ಹಾಗೆಯೇ ಉಳಿಯಿತು. 

ಅವತ್ತು ಎಂದಿಗಿಂತ ಬೇಗ ಮನೆಗೆ ಬಂದಿದ್ದ ರಮಾಕಾಂತ ಗೌಡ. ಗಡಿಬಿಡಿಯಲ್ಲಿ ಬಂದವನೇ ಮನೆ ತಲುಪುವ ಮೊದಲೇ 'ರಮೇಶ.. ರಮೇಶ...' ಅಂತ ಕೂಗುತ್ತಾ ಮನೆ ಬಾಗಿಲು ಇನ್ನೂ ಹಾಕಿರುವುದನ್ನ ನೋಡಿ ಮಗ ಬರುವ ಸಮಯ ಇನ್ನೂ ಆಗಿಲ್ಲವೆಂದು ನೆನೆದು  ತನ್ನ ಬಳಿ ಇದ್ದ ಮತ್ತೊಂದು ಕೀ ಇಂದ ಮನೆ ಬೀಗ ತೆರೆದ. ಮೇರಿಯ ಮಾತು ಅವನನ್ನು ಚುಚ್ಚುತ್ತಿತ್ತು. ಮಗನ ಮಾರ್ಕ್ಸ್ ಕಾರ್ಡ್ ತೆಗೆದು ಅವಳ  ಮುಂದಿಟ್ಟು ಇಷ್ಟು ಓದಿದ್ರೆ ಸಾಕಾ ಅಂತ ಕೇಳಿ ತಿರುಗೇಟು ಕೊಡಬೇಕು ಎಂದು ತೀರ್ಮಾನ ಮಾಡಿದ್ದ. ಒಳಕೋಣೆ ಹೊಕ್ಕು ಮೇಲಿದ್ದ ಮಗನ ಟ್ರಂಕನ್ನ ತೆಗೆದು ಕೆಳಗಿಟ್ಟ. ಟ್ರಂಕಿನ  ಒಳಗಿದ್ದ ಹಸಿರು ರಟ್ಟಿನ ಫೈಲ್ ತೆರೆದವನಿಗೆ ಅದರಲ್ಲಿ P U C ಯ ಎರಡು ಮಾರ್ಕ್ಸ್ ಕಾರ್ಡ್ ಸಿಕ್ಕವು. ಎರಡರಲ್ಲೂ ಇವನದೇ ಹೆಸರು.   ಮೊದಲೊಮ್ಮೆ ಫೇಲ್ ಆಗಿದ್ದು ಮರೆಮಾಚಿದನಾ. ಪಾಸಾಗಿದ್ದೆನೆಂದು  ಸುಳ್ಳು ಬೊಗಳಿದನಾ. ಅವನು ಬರುತ್ತಿದಂತೆ ಎರಡು ಎರಡು ಬಾರಿಸಿ ಕೇಳಬೇಕು ಎಂದು ನಿರ್ಧರಿಸಿದ. ಮತ್ತೆ ಟ್ರಂಕಿನ ತುಂಬಾ ತಡಕಾಡಿದ. ಡಿಗ್ರಿ ಮೊದಲ ಸೆಮಿಸ್ಟರ್  ಮಾರ್ಕ್ಸ್ ಕಾರ್ಡ್ ಬಟ್ಟೆಗಳ ಮಧ್ಯೆ ಅನಾಥವಾಗಿ ಬಿದ್ದುಕೊಂಡಿತ್ತು. ದಪ್ಪ ಅಕ್ಷರಗಳಲ್ಲಿ  FAIL ಎಂದು ಬರೆದಿತ್ತು. ವಿಷಯ ನೋಡುತ್ತಾ ಬಂದ. ಕನ್ನಡ ಒಂದು ಬಿಟ್ಟರೆ ಮತ್ತೆಲ್ಲಾ ಫೇಲ್. ಉಳಿದ ಸೆಮಿಸ್ಟರ್ ನ ಯಾವ ಮಾರ್ಕ್ಸ್ ಕಾರ್ಡ್  ಕೂಡ ಅಲ್ಲಿರಲಿಲ್ಲ. ಇಷ್ಟು ದಿನ ತನಗೆ ಮೋಸ  ಮಾಡಿದ ಬೋಸುಡಿ ಮಗ ಎಂದುಕೊಂಡ ಅವನ ಕೋಪ ತಾರಕಕ್ಕೇರಿತ್ತು. 

ಮತ್ತೆ ಟ್ರಂಕ್ ತಡಕಾಡಿದ ಅವನಿಗೆ ಟ್ರಂಕಿನ ತಳದಲ್ಲಿ ಹಾಸಿದ ಪೇಪರ್ ನ ಕೆಳಗೆ ಕಂಡಿದ್ದು, ಅವನ ಹೆಂಡತಿಯ ಫೋಟೋ. ಅವಳು ಓಡಿ ಹೋಗಿ ಇನ್ನೊಂದು ತಿಂಗಳಿಗೆ ೧೦ ವರ್ಷ. ಅವಳ ಮುಖವೇ ಮರೆತು ಹೋಗಿತ್ತು. ಅವಳು ಬಿಟ್ಟು ಹೋದ ದಿನದಿಂದ ಅವಳ ಫೋಟೋ ನೋಡುವುದಿರಲಿ ಅವಳ ಬಗ್ಗೆ ಒಂದೇ ಒಂದು ಮಾತನ್ನಾಡಿರಲಿಲ್ಲ. ಅವಳ ಕಂಡಕ್ಟರ್ ಮೇಲಿನ ಪ್ರೀತಿಗಾಗಿ ಅವನ  ಕುಡಿತದ ಕಾರಣ ಹೇಳಿ ಬಿಟ್ಟು ಹೋದ ಅವಳು ಹೋಗುವ ಮುಂಚೆ ವಠಾರದಲ್ಲಿ, ನೆಂಟರಲ್ಲಿ ಎಲ್ಲರಿಗೂ ಇವನ ಬಗ್ಗೆ ಸಾಕಷ್ಟು ಹೇಳಿ  ಇನ್ನಿವನ ಜೊತೆ ಇರಲಾರೆ ಎಂದು ಹೋದವಳು, ಬಿಟ್ಟು ಹೋದ ಒಂದೇ ತಿಂಗಳಿಗೆ ಆ ಕಂಡಕ್ಟರ್ ಜೊತೆ ಮದುವೆಯಾಗಿದ್ದಳು. ಮಗ ಅವಾಗ ಏಳನೇ ಕ್ಲಾಸ್ ನಲ್ಲಿ ಓದುತ್ತಿದ್ದ. ಮನೆಗೆ ಬಂದವನೇ ಅಮ್ಮ ಎಲ್ಲಿ ಕಾಣ್ತಿಲ್ಲ, ಅಂತ ಕೇಳಿದರೆ ಅವನು  ಉತ್ತರಿಸಿರಲಿಲ್ಲ. ಪಕ್ಕದ ಮನೆಯ ಶಾಂತಮ್ಮ ಅವನಿಗೆ ವಿವರಿಸಿದ್ದಳು. "ನಿಮ್ಮಮ್ಮ ಒಡೊಗಯ್ತೆ  ಕಣೋ .. ನಿನ್ನ ಅಪ್ಪನ್ನ ಜೊತೆ ಏಗಕ್ಕಾಗಲ್ವನ್ತೆ ಅವಳಿಗೆ... ".  ಅವತ್ತಿಂದ ರಮಾಕಾಂತನ ಕುಡಿತ ಇನ್ನೂ ಹೆಚ್ಚಿತ್ತು. ಮಗನಿಗೆ ಅಡಿಗೆ ಮಾಡಿಟ್ಟು ಕುಡಿಯಲು ಹೋದರೆ ಮನೆಗೆ ಬರುವಾಗ ಮದ್ಯರಾತ್ರಿ. ರಮೇಶ ಮನೆಯಲ್ಲಿ ಮಾತನ್ನೇ ಆಡದೆ ಎಷ್ಟೋ ವರ್ಷಗಳಾಗಿತ್ತು. ಅಪ್ಪ ಮಾಡಿದ ಅಡಿಗೆ ಸೇರುತ್ತಿರಲಿಲ್ಲ. ಅಮ್ಮನ ಹಾಡಿರುತ್ತಿರಲಿಲ್ಲ. ಜಗಳ ಮಾಡಲೂ ಜೊತೆಯಿರಲಿಲ್ಲ. ಕಾಲೇಜಿಗೆ ಸೇರಿದ ಮೇಲೆ ಮನೆಗೆ ಲೇಟಾಗಿ ಬರಲು ಶುರು ಮಾಡಿದ. ತನ್ನ ಗೆಳೆಯರ ಜೊತೆ ಕೂತು ಹರಟೆ ಹೊಡೆಯುತ್ತಿದ್ದರೆ ಮನೆಗೆ ಬರಬೇಕೆಂದಿನಿಸುತ್ತಿರಲಿಲ್ಲ. ಹೀಗೆ ಗೆಳೆಯರ ಜೊತೆ ಕೂತು ಕುಡಿಯುವುದು ಕೂಡ ಅಭ್ಯಾಸವಾಯಿತು. ಒಂದಿನ ಕುಡಿದ ಮೇಲೆ ಉಳಿದದ್ದೊಂದಷ್ಟನ್ನ ನಶೆಯಲ್ಲಿ ಮನೆಗೆ ತಂದು ಕುಡಿಯಲಾರಂಭಿಸಿದ್ದ. ರಮಾಕಾಂತನಿಗೆ ಅದೇನೆನ್ನಿಸಿತೋ ಏನೋ ಅವತ್ತಿಂದ ಕುಡಿತ ಬಿಟ್ಟವನು ಕೆಲಸಕ್ಕಾಗಿ ಅಲೆಯಲು ಶುರು ಮಾಡಿದ್ದ. ಹೆಂಡತಿಯ ಫೋಟೋ ನೋಡುತ್ತಿದಂತೆ ಎಲ್ಲವೂ ಒಮ್ಮೆಲೇ ಕಣ್ಣ ಮುಂದೆ ಸುಳಿದು ಹೋಯಿತು. ಎಲ್ಲಾ ಸರಿ ಇದ್ದಿದ್ದರೆ ಮಗನೂ ಸರಿ ಇರುತ್ತಿದ್ದ ಅನಿಸಲು ಆರಂಭವಾಯಿತು. ಹೆಂಡತಿಯ ಮೇಲಿನ ಕೋಪ ಹೆಚ್ಚಾಗುತ್ತಿದ್ದಂತೆ ಮಗನ ಮೇಲೆ ಕನಿಕರ ಹೆಚ್ಚಾಗಿ ಅವನ ಮೇಲಿನ ಕೋಪ ಶಾಂತವಾಯಿತು. ಮಗ ಮನೆಗೆ ಬಂದವನೇ ಅವನಿಗೆ ಕೇಳಿದ "ಕಾಲೇಜ್ ಗೆ ಹೋಗೋದು ನಿಲ್ಸಿದಿಯಾ... " ಎರಡು ವರ್ಷ ಆಯಿತು ಅಂತ ಗಟ್ಟಿ ದನಿಯಲ್ಲಿ ಆ ಕಡೆಯಿಂದ ಬಂದ ಉತ್ತರಕ್ಕೆ ಮತ್ತೆ ಪ್ರಶ್ನೆ ಹಾಕುವ ಮನಸ್ಸು ಬರಲಿಲ್ಲ ಅಥವಾ ಧೈರ್ಯ ಸಾಲಲಿಲ್ಲ. 

"ಎದ್ದವನೇ ITPL  ಬಸ್ ಹತ್ತಿ ನಾನು ಕೆಲಸ ಮಾಡೋ ಜಾಗಕ್ಕೆ ಬಾ.. ಅಡ್ರೆಸ್ ದಿಂಬಿನ ಕೆಳಗೆ ಇಟ್ಟಿದಿನಿ.." ಎಂದು ರಮೇಶನಿಗೆ ಹೇಳಿ ಮತ್ತದೇ ಶರ್ಟು, ಪ್ಯಾಂಟು, ಸಾಕ್ಸ್ ಮತ್ತೊಂದು ದಿನಕ್ಕೆ ವಿಸ್ತರಿಸಿ ಕಂಪನಿ ಒಳ ಸೇರಿದ. ಸುಮಾರು ಹತ್ತು ಗಂಟೆಯ ಹೊತ್ತಿಗೆ ರಮೇಶ ಅಲ್ಲಿಗೆ ಬಂದ. ಅವನನ್ನ ಸೂಪರ್ವೈಸರ್ ಬಳಿ ಕರೆದುಕೊಂಡು ಹೋಗಿ "ಇವನು ನನ್ನ ಮಗ... PUC  ಓದಿದಾನೆ... ಇಲ್ಲೇ ಒಂದು ಕೆಲಸ ಕೊಡ್ಸಿ" ಅಂಗಲಾಚಿದ. ಮಾರನೆಯ ದಿನದಿಂದಲೇ ಕೆಲಸಕ್ಕೆ ಸೇರಿಕೊಳ್ಳಲಿ ಅಂದಿದ್ದ ಸೂಪರ್ವೈಸರ್. 

ಮಾರನೆಯ ದಿನ ರಿಸೆಪ್ಶನ್ ಡೆಸ್ಕ್ ಬಳಿ ಹೋಗಿ ಮಗನಿಗೆ ಟೆಂಪರರಿ I D ಕಾರ್ಡ್ ಮಾಡಿಸಲು ಮೇರಿಯ ಮುಂದೆ ಬಂದು ನಿಂತ. ಮೊನ್ನೆ ತಾನು ನಕ್ಕಿದ್ದು  ರಮಾಕಾಂತನಿಗೆ ಬೇಜಾರಾಯಿತೆಂದು ತಿಳಿದು ತಪ್ಪು ಭಾವಿಸದಿರಲಿ ಎಂದು ಮೊದಲ ಬಾರಿಗೆ "ಏನ್ರಿ ರಮಾಕಾಂತ್... ಆಯ್ತಾ ತಿಂಡಿ... ಇವನು ನಿಮ್ಮ ಮಗನಾ... ನಿಮಗೆ ಇಷ್ಟು ದೊಡ್ಡ ಮಗ ಇದಾನೆ ಅಂತ ಗೊತ್ತೇ ಆಗಲ್ಲ ನೋಡಿ.. "  ಅವನನ್ನ ಮಾತಾಡಿಸಿದ್ದಳು. ಮಾತಾಡುವ ಉತ್ಸಾಹ ಇವನಿಗಿರಲಿಲ್ಲ. ಹ್ಮ್ ಎಂದಷ್ಟೇ ಹೇಳಿ ಸುಮ್ಮನಾದ. ಅವಳ ನಗು ಮತ್ತೆ ಇವನನ್ನ ಅಣಕಿಸಿದಂತಾಯಿತು. ಮತ್ತೆ ಮುಖ ಎತ್ತಿ ಅವಳನ್ನ ನೋಡುವ ಉತ್ಸಾಹವಿರಲಿಲ್ಲ. ಮಚ್ಚೆಯೋ ಬಿಂದಿಯೋ ಕುತೂಹಲ ಅಲ್ಲಿಗೇ ಮುಗಿದು ಹೋಗಿತ್ತು. ಮಗನಿಗೆ  ರಿಸೆಪ್ಶನ್ ಡೆಸ್ಕ್ ಬಳಿ ಐ  ಡಿ ಕಾರ್ಡ್, ಬಾಗ್ ಪರೀಕ್ಷಿಸುವ ಕೆಲಸ ವಿವರಿಸಿದ. ಮಗನ ಹೊಸ ಯುನಿಫಾರ್ಮ್ ನ ನೀಲಿ ನಕ್ಷತ್ರದ ಚಿಹ್ನೆ ನೋಡಿ ಕಣ್ಣಿಗೆ ಮಂಪರು ಹತ್ತಿದಂತಾಯಿತು. ಎಲ್ಲೋ ಇದ್ದ  ಮೋಡವೊಂದು ತೇಲಿ ಬಂದು ಆಕಾಶದಲ್ಲಿ ನಕ್ಷತ್ರ ಕರಗಿ ಹೋಗುವಂತೆ ನೀಲಿ ನಕ್ಷತ್ರದ ಚಿಹ್ನೆ ಮಸುಕು ಮಸುಕಾಯಿತು. ತಕ್ಷಣ ಅಲ್ಲಿಂದ ಹೊರಟು ಬೇಸ್ಮೆಂಟ್ ಗೆ ತೆರಳಿ  ಮತ್ತೊಂದು ಹೊಸ ಕನಸೊಂದಕ್ಕೆ ತೆರೆದುಕೊಳ್ಳಲು ಕಾಯುತ್ತಾ ಕೂತ. 





ಡಿಸೆಂಬರ್ 3, 2012

Candle light dinner





ಜಗಮಗಿಸುವ ಬೆಳಕಿನ
Hotel ನಲ್ಲಿ
ಕೃತಕ ಕತ್ತಲ ನಿರ್ಮಾಣ

Current ಇಲ್ಲದ ಕಾಲದಲ್ಲಿ
ಅಜ್ಜ-ಅಜ್ಜಿ ವರ್ಷಗಟ್ಟಲೆ ಮಾಡಿದ
ರಾತ್ರಿಯೂಟಕ್ಕೆ -
ಹೊಸ ವ್ಯಾಖ್ಯಾನ

Table ಮೇಲಿಟ್ಟ ಮೇಣದ ಬತ್ತಿಯ
ಬಡ ಬೆಳಕಲ್ಲಾದರೂ ಅವಳು
ಚಂದ ಕಾಣಬಹುದೇನೋ ಎಂದು ನೆನೆದು
ಒಂದು ಕ್ಷಣ ರೋಮಾಂಚನ

-
ಅಕ್ಷಯ ಪಂಡಿತ್, ಸಾಗರ